ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರವನ್ನು ಬಳಸಿಕೊಂಡು “ಶ್ರದ್ಧಾಂಜಲಿ” ಎಂಬ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
‘ಬಿಲ್ಲವ ಸಂದೇಶ್’ (Billava Sandesh) ಎಂಬ ಫೇಸ್‌ಬುಕ್ ಖಾತೆಯಿಂದ ಈ ಪೋಸ್ಟ್ ಪ್ರಕಟವಾಗಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ನಿಂದಿಸುವ ಹಾಗೂ ಅವಮಾನಿಸುವ ಉದ್ದೇಶದಿಂದ ಬರಹ ಹಾಕಲಾಗಿದೆ ಎನ್ನಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಿಧ ವಲಯಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವೈರಲ್ ಆಗಿರುವ ಪೋಸ್ಟ್‌ನಲ್ಲಿ, “ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯ ಶೋಷಿತ ದಲಿತ ಸಮುದಾಯದ ಪರ ನಿಲ್ಲದೆ ಎಲ್ಲರನ್ನು ಅಗಲಿ ತೆರಳಿದ್ದಾರೆ” ಎಂದು ಉಲ್ಲೇಖಿಸಿ, ಶ್ರದ್ಧಾಂಜಲಿ ಸಲ್ಲಿಸುವ ರೀತಿಯಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಪೋಸ್ಟ್ ಮಾಡಿದ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಸುಳ್ಯ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸುಳ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಆರೋಪಿಯನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ವೇದವ್ಯಾಸ್ ಕಾಮತ್, “ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿ ಹಾಗೂ ದುಷ್ಟ ಉದ್ದೇಶದ ಬರಹ ಪ್ರಕಟಿಸಿರುವುದು ಖಂಡನೀಯ. ಅಸಭ್ಯ ಭಾಷೆ ಬಳಸಿ ಮಹಿಳಾ ಶಾಸಕರನ್ನು ಬೆದರಿಸುವಂತಹ ವರ್ತನೆ ನಾಗರಿಕ ಸಮಾಜಕ್ಕೆ ಕಳಂಕ. ಇದು ಕೇವಲ ಒಬ್ಬ ದಲಿತ ಮಹಿಳೆಗೆ ಮಾಡಿದ ಅವಮಾನವಲ್ಲ, ದೇಶದ ಪ್ರತಿಯೊಬ್ಬ ಮಹಿಳೆಯ ಗೌರವದ ಮೇಲೆ ನಡೆದ ದಾಳಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲು
ಈ ಸಂಬಂಧ ದಿನಾಂಕ 07-01-2026 ರಂದು ಸದಾನಂದ ಬಂಟ್ವಾಳ ತಾಲೂಕು ಅವರು ನೀಡಿದ ದೂರಿನ ಆಧಾರದಲ್ಲಿ, ‘Billava Sandesh’ ಎಂಬ ಫೇಸ್‌ಬುಕ್ ಖಾತೆಯಿಂದ ಸುಳ್ಯ ಶಾಸಕರ ಫೋಟೊ ಬಳಸಿ ಅವಹೇಳನಕಾರಿ ಬರಹ ಹಾಗೂ ಸುಳ್ಳು ಅಪಪ್ರಚಾರ ನಡೆಸಲಾಗಿದೆ ಎಂದು ಆರೋಪಿಸಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!