ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ತಿಕಲ್ಲು ಭಾರತ್ ಪೆಟ್ರೋಲ್ ಪಂಪ್ ಸಮೀಪ ವಾಹನ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಕೂಟ ಸೇರಿ ಯುವಕನ ಮೇಲೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ.
ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಸರೋಳಿ ಮನೆ ನಿವಾಸಿ ಅಬೂಬಕ್ಕರ್ ರಾಶಿಕ್ (28) ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ಪ್ರಕಾರ, ಸೂರಜ್ ಎಂಬವರು ಕೆಎ-15-ಎನ್-0590 ಸಂಖ್ಯೆಯ ವಾಹನದ ಮಾಲೀಕರಾಗಿದ್ದು, ಸಾಲದ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯವರು ಆ ವಾಹನವನ್ನು ಜಪ್ತಿ ಮಾಡಿಕೊಂಡಿದ್ದರು. ಬಳಿಕ ಅಬೂಬಕ್ಕರ್ ರಾಶಿಕ್ ಅವರು ಬಾಕಿ ಹಣವನ್ನು ಪಾವತಿಸಿ, ಶ್ರೀರಾಮ್ ಫೈನಾನ್ಸ್‌ನಿಂದ ಆ ವಾಹನವನ್ನು ಬಿಡುಗಡೆ ಮಾಡಿಸಿಕೊಂಡಿದ್ದರು.
ಇದರಿಂದ ಅಸಮಾಧಾನಗೊಂಡ ಆರೋಪಿ ಸೂರಜ್ ಹಾಗೂ ಇತರ 7–8 ಮಂದಿ ದಿನಾಂಕ 07-01-2026ರ ಮಧ್ಯರಾತ್ರಿ ಸತ್ತಿಕಲ್ಲು ಭಾರತ್ ಪೆಟ್ರೋಲ್ ಪಂಪ್ ಬಳಿ ಅಕ್ರಮ ಕೂಟ ಸೇರಿ ಪಿರ್ಯಾದುದಾರರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸೂರಜ್ ಅವರು ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ಅಬೂಬಕ್ಕರ್ ರಾಶಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ಅಪಾಯದಿಂದ ಪಾರಾಗಿದ್ದು ಜೀವಾಪಾಯದಲ್ಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 04/2026 ಕಲಂ 189(2), 191(2), 191(3), 115(2), 118, 109 ಹಾಗೂ 190 ಬಿಎನ್‌ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!