
ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.175/2022 (ಕಲಂ 279, 304(ಎ) ಐಪಿಸಿ) ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದಲ್ಲಿ, ಅಪಘಾತ ಸಮಯದಲ್ಲಿ ಗಾಯಗೊಂಡು ನೊಂದ ಅಪ್ರಾಪ್ತ ಬಾಲಕನಿಗೆ ಮೋಟಾರು ಸೈಕಲ್ ಚಾಲನೆ ಮಾಡಲು ವಾಹನ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ದೇವಪ್ಪ ನಾಯ್ಕ್ ವಿರುದ್ಧ ಸಲ್ಲಿಸಿದ್ದ ದೋಷಾರೋಪಣ ಪಟ್ಟಿಯ ವಿಚಾರಣೆ ಪೂರ್ಣಗೊಂಡಿದೆ.
ಆಗಿನ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್ ಎಂ.ಎಸ್. ಅವರು ದೇವಪ್ಪ ನಾಯ್ಕ್ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಪುತ್ತೂರು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪ್ರಕೃತಿ ಕಲ್ಯಾಣಪುರ ಅವರು, ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ಮೋಟಾರು ಸೈಕಲ್ ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ದೇವಪ್ಪ ನಾಯ್ಕ್ ಅವರಿಗೆ ₹25,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದ ಪರವಾಗಿ ಸರಕಾರಿ ಸಹಾಯಕ ಅಭಿಯೋಜಕರಾದ ಶ್ರೀಮತಿ ಕವಿತಾ ಕೆ. ಅವರು ವಾದ ಮಂಡಿಸಿದ್ದರು.






