ಮಹಿಳೆಯೊಂದರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಗಂಭೀರ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಎಂಜಿನಿಯರ್ ವಿಠ್ಠಲ್ ರಾಠೋಡ್ (60) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಡಿ.10ರಂದು ವಿಠ್ಠಲ್ ರಾಠೋಡ್ ಮೇಲೆ ಹಲ್ಲೆ ನಡೆದಿದ್ದು, ಅವರನ್ನು ಗಂಭೀರ ಗಾಯ ಸ್ಥಿತಿಯಲ್ಲಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದ್ರೂ, ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ವಿಠ್ಠಲ್ ರಾಠೋಡ್ ಅವರು ಕಾನೂನು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 4-5 ವರ್ಷಗಳಿಂದ ಛತ್ತೀಸ್ಗಢ ಮೂಲದ ಕುಟುಂಬವೊಂದು ಅವರ ಬಳಿ ಕೆಲಸ ಮಾಡುತ್ತಿದ್ದು, ಆ ಕುಟುಂಬದ ಮಹಿಳೆ ವಿಮಲಾ ಜೊತೆ ವಿಠ್ಠಲ್ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಹಲವು ಬಾರಿ ಜಗಳಗಳು ನಡೆದಿದ್ದವು.

ಜನವರಿ 10ರ ರಾತ್ರಿ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ವೇಳೆ ಮೇಘವ್ ಮತ್ತು ಭಗವಾನದಾಸ್ ಎಂಬ ಆರೋಪಿಗಳು ವಿಠ್ಠಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮದ್ಯಪಾನ ಮಾಡಿ ಬಿದ್ದು ಗಾಯಗೊಂಡಿದ್ದಾರೆ ಎಂದು ನಾಟಕವಾಡಿದರೆಂಬ ಆರೋಪ ಕೇಳಿಬಂದಿದೆ.

ಪೊಲೀಸರು ಪ್ರಕರಣದ ಕುರಿತು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಘಟನೆ ರಹಸ್ಯ ಬಹಿರಂಗಗೊಂಡಿದೆ. ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ಮೂಲದ ನಿವಾಸಿ ವಿಠ್ಠಲ್ ರಾಠೋಡ್ ಅವರನ್ನು ಛತ್ತೀಸ್ಗಢ ಮೂಲದ ದಂಪತಿ ಮತ್ತು ಅವರ ಮಗ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮೇಘವ್, ಭಗವಾನದಾಸ್ ಮತ್ತು ವಿಮಲಾಳನ್ನು ಬಂಧಿಸಲಾಗಿದೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!