ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ತಡೆದು ನಿಲ್ಲಿಸಿ ಧರ್ಮ ವಿಚಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಜನವರಿ 11ರಂದು ಸಂಜೆ 6.05ರ ಸುಮಾರಿಗೆ ನಾಲ್ವರು ಆರೋಪಿಗಳು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ‘ನೀನು ಹಿಂದೂನಾ, ಮುಸ್ಲಿಂನಾ’ ಎಂದು ಪ್ರಶ್ನಿಸಿ, ಬಾಂಗ್ಲಾದೇಶದವನು ಎಂದು ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಬಳಿಕ ತಾಪಿ (ಸಾರಣಿ ಮಾಡುವ ಕರಣಿ) ಬಳಸಿ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿರುವುದಾಗಿ ದೂರಲಾಗಿದೆ.
ಈ ಸಂಬಂಧ ಜನವರಿ 12ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 03/2026ರಂತೆ ಭಾರತೀಯ ನ್ಯಾಯ ಸಂಹಿತೆ–2023ರ ಕಲಂಗಳು 126(2), 352, 351(3), 353, 109, 118(1) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳನ್ನು
ರತೀಶ್ ದಾಸ್ (32), ರಾಮ್ ದಾಸ್ ಪುತ್ರ, ರಾಮಣ್ಣ ಜ್ಯೋಗಿ ಕಂಪೌಂಡ್, ನಾರಾಯಣಗುರು ಭಜನಾ ಮಂದಿರದ ಬಳಿ, ಕೂಳೂರು ಗ್ರಾಮ,
ಧನುಷ್ (24), ಶ್ರೀನಿವಾಸ ಪುತ್ರ, ನಾರಾಯಣಗುರು ಭಜನಾ ಮಂದಿರದ ಬಳಿ, ಕೂಳೂರು ಗ್ರಾಮ,
ಸಾಗರ್ (24), ಸುರೇಶ್ ಪುತ್ರ, ಪ್ರೈಮ್ ಕಾಂಪೌಂಡ್, ರಾಯಕಟ್ಟೆ, ಕೂಳೂರು ಗ್ರಾಮ
ಎಂದು ಗುರುತಿಸಲಾಗಿದೆ. ಎಲ್ಲರೂ ಮಂಗಳೂರು ತಾಲೂಕಿನ ನಿವಾಸಿಗಳಾಗಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ್ ಹಾಗೂ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!