
ಪುತ್ತೂರು:ಸುಬ್ರಹ್ಮಣ್ಯದಲ್ಲಿ ರೈತನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ಸುಳ್ಳು ವರದಿ ನೀಡಿ ಗೋಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದು ಅತ್ಯಂತ ಖಂಡನೀಯ ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಶ್ರಫ್ ಬಾವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಪುತ್ತೂರಿನ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ನಡೆಸುತ್ತಿರುವ ನ್ಯಾಯಸಮ್ಮತ ಹೋರಾಟಕ್ಕೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ ನೀಡಿದ್ದು, ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಿರಿಯಾಪಟ್ಟಣದ ರೈತರು ತಮ್ಮ ಜೀವನೋಪಾಯಕ್ಕಾಗಿ ಅಧಿಕೃತವಾಗಿ ಖರೀದಿ ಮಾಡಿ ತರುತ್ತಿದ್ದ ಹಾಲು ಕರೆಯುವ ಹಾಗೂ ಗರ್ಭಿಣಿ ಹಸುವನ್ನು ‘ಮಾಂಸಕ್ಕಾಗಿ ಸಾಗಾಟ’ ಎಂದು ಬಿಂಬಿಸಿರುವುದು ಪೊಲೀಸರ ಅಮಾನವೀಯ ನಡೆ ಎಂದು ಆರೋಪಿಸಿದರು. ರೈತರು ಕಣ್ಣೆದುರೇ ಹಾಲು ಕರೆಯುವ ಮೂಲಕ ಸಾಬೀತುಪಡಿಸಿದರೂ ಅಧಿಕಾರಿಗಳು ಕೇಳಿಸಿಕೊಳ್ಳದಿರುವುದು ವ್ಯವಸ್ಥೆಯ ದುರಂತವಾಗಿದೆ ಎಂದರು.
ಗರ್ಭಿಣಿ ಹಸುವನ್ನು ಒಂದು ವಾರಕ್ಕೂ ಹೆಚ್ಚು ಕಾಲ ಪೊಲೀಸ್ ವಶದಲ್ಲಿಟ್ಟಿರುವುದು ಸರಿಯಲ್ಲ. ಆ ಹಸುವಿನ ಜೀವಕ್ಕೆ ಅಥವಾ ಗರ್ಭಕ್ಕೆ ಏನಾದರೂ ತೊಂದರೆಯಾದರೆ ಅದರ ನೇರ ಹೊಣೆಗಾರಿಕೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೇ ಇರುತ್ತದೆ ಎಂದು ಎಚ್ಚರಿಸಿದ ಅವರು, ಕೂಡಲೇ ಹಸುವಿನ ವೈದ್ಯಕೀಯ ಪರೀಕ್ಷೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ರೈತರಿಂದ ಹಣ ವಸೂಲಿ ಮಾಡಿರುವ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರು ದ್ವೇಷದ ರಾಜಕಾರಣ ಅಥವಾ ಪೂರ್ವಗ್ರಹ ಪೀಡಿತರಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕು. ರೈತರಿಗೆ ನ್ಯಾಯ ಸಿಗದಿದ್ದಲ್ಲಿ ಎಸ್‌ಡಿಪಿಐ ಪಕ್ಷವು ರೈತ ಸಂಘಟನೆಗಳೊಂದಿಗೆ ಸೇರಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಕೈಜೋಡಿಸಲಿದೆ. ರೈತರು ಈ ದೇಶದ ಬೆನ್ನೆಲುಬು; ಅವರನ್ನು ಕಟುಕರೆಂದು ಬಿಂಬಿಸುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಪುತ್ತೂರು ಮಿನಿ ವಿಧಾನಸೌಧದ ಮುಂಭಾಗ ನಡೆಯುತ್ತಿರುವ ಹೋರಾಟಕ್ಕೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ನಿಯೋಗ ಭೇಟಿ ನೀಡಿತು.
ನಿಯೋಗದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಹಾಗೂ ರೈತ ಮುಖಂಡ ವಿಕ್ಟರ್ ಮಾರ್ಟಿಸ್, ಎಸ್‌ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಝ್ ಬಳಕ್ಕ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಮುಸ್ತಫಾ ಮುಸ್ಲಿಯಾರ್, ಸದಸ್ಯರಾದ ಯಹ್ಯಾ ಕೂರ್ನಡ್ಕ, ಸಿರಾಜ್ ಕೂರ್ನಡ್ಕ, ಅದ್ದು ಕೊಡಿಪ್ಪಾಡಿ, ತಾಜುದ್ದೀನ್ ಸಾಲ್ಮರ ಹಾಗೂ ಇಫಾಝ್ ಬನ್ನೂರು ಉಪಸ್ಥಿತರಿದ್ದರು.






