
ಪುತ್ತೂರು: ಕಾರು ಹಾಗೂ ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 106 ಕಿಲೋಗ್ರಾಂ 60 ಗ್ರಾಂ ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಜನವರಿ 19ರಂದು ಸಂಜೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಬಳಿ ಪೊಲೀಸ್ ಉಪನಿರೀಕ್ಷಕ ಗುಣಪಾಲ ಜೆ. ನೇತೃತ್ವದ ತಂಡವು ಕಾರು ಮತ್ತು ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ತಪಾಸಣೆಗೆ ನಿಲ್ಲಿಸಿತು. ಕಾರು ಚಾಲಕ ರಫೀಕ್ ಪಿ. (37), ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಕಾರು ಪರಿಶೀಲನೆಯ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿ ಸುಮಾರು 100 ಗ್ರಾಂ ತೂಕದ ಗಾಂಜಾ ಎಲೆ, ಹೂ ಹಾಗೂ ಕಾಯಿ ಪತ್ತೆಯಾಯಿತು.
ನಂತರ ಗೂಡ್ಸ್ ವಾಹನ ಚಾಲಕ ಅಬ್ದುಲ್ ಸಾದಿಕ್ (37), ಚಾರ್ಮಾಡಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದ್ದು, ವಾಹನ ಪರಿಶೀಲಿಸಿದಾಗ 73 ಕಟ್ಟುಗಳಲ್ಲಿ ಒಟ್ಟು 106 ಕಿಲೋಗ್ರಾಂ 60 ಗ್ರಾಂ ಗಾಂಜಾ ಪತ್ತೆಯಾಗಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ. 53.03 ಲಕ್ಷವಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಗಾಂಜಾವನ್ನು ಕೇರಳ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಗಾಂಜಾ ಸಾಗಾಟಕ್ಕೆ ಬಳಸಿದ್ದ ಎರಡು ವಾಹನಗಳು, ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 09/2026 ಅಡಿಯಲ್ಲಿ NDPS ಕಾಯ್ದೆ 1985ರ ಕಲಂ 8(c), 20(b)(ii)Cರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಗುಣಪಾಲ ಜೆ. ಹಾಗೂ ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ ಮತ್ತು ವಿನೋದ್ ಭಾಗವಹಿಸಿದ್ದರು






