ಪುತ್ತೂರು :ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಶುಕ್ರವಾರ ಈದುಲ್ ಫಿತ್ರ್ʼ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು. ಬೆಳಗ್ಗೆ ಅರ್ಹರಿಗೆ ಫಿತರ್ ಝಕಾತ್ ವಿತರಿಸಿದ ನಂತರ ಹೊಸ ಬಟ್ಟೆ ಧರಿಸಿ ಮಸೀದಿಗಳಿಗೆ ತೆರಳಿ ವಿಶೇಷ ನಮಾಝ್ ಸಲ್ಲಿಸಿದರು.
ನಮಾಝ್ ಬಳಿಕ ಪರಸ್ಪರ ಹಸ್ತಲಾಘವ ಹಾಗೂ ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿವಿಧ ಮಸೀದಿಗಳಲ್ಲಿ ಈದ್ ವಿಶೇಷ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಿತು.
ಆರ್.ಜೆ.ಎಂ ಮುಕ್ವೆ ಮಸೀದಿಯಲ್ಲಿ ಖತೀಬರಾದ ಮುಹಮ್ಮದ್ ಇರ್ಷಾದ್ ಫೈಝಿ (ಪಾಲ್ತಾಡ್ ಬೆಳ್ಳಾರೆ) ಅವರು ಈದ್ ನಮಾಝ್ ನೇತೃತ್ವ ವಹಿಸಿ ಖುತ್ಬಾ ಪಾರಾಯಣ ಮಾಡಿದರು. ತಮ್ಮ ಈದ್ ಸಂದೇಶದಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಿ, ಪರಸ್ಪರ ಸಹೋದರಭಾವದಿಂದ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಕರೆ ನೀಡಿದರು.
ರಹ್ಮಾನಿಯ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷ ಎಂ.ಕೆ. ಖಾಸಿಂ ಹಾಜಿ, ಪ್ರಧಾನ ಕಾರ್ಯದರ್ಶಿ ಇಸಾಕ್ ಹಾಜಿ ಪಡೀಲ್ ಸೇರಿದಂತೆ ಜಮಾಅತ್ ರು ಈದ್ ನಮಾಝ್‌ನಲ್ಲಿ ಭಾಗವಹಿಸಿದರು.














