ಮಂಗಳೂರು, ಮಾ. 21: ಯಕ್ಷಗಾನ ತೆಂಕುತಿಟ್ಟಿನ ಹಿರಿಯ ದಶಾವತಾರಿ ಕಲಾವಿದ ಸೂರಿಕುಮೇರು ಗೋವಿಂದ ಭಟ್ (88) ಅವರು ಶುಕ್ರವಾರ ರಾತ್ರಿ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಇರುವ ತಮ್ಮ ಹಿರಿಯ ಪುತ್ರನ ಮನೆಯಲ್ಲಿ ವಿಧಿವಶರಾದರು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕೆಲಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಬಳಿಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸದಲ್ಲಿ ಶುಕ್ರವಾರ ರಾತ್ರಿ 9.10ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಯಕ್ಷಗಾನ ಕ್ಷೇತ್ರದಲ್ಲಿ ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ ಮೇಳಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಸುಮಾರು 55 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ವೃತ್ತಿಜೀವನ ನಡೆಸಿದರು. ಯಕ್ಷಗಾನದಿಂದ ನಿವೃತ್ತಿಯಾದ ನಂತರ ತೀರ್ಥಹಳ್ಳಿ ಹಾಗೂ ಬಿ.ಸಿ.ರೋಡ್‌ನ ಅಜ್ಜಿಬೆಟ್ಟಿನಲ್ಲಿರುವ ಪುತ್ರರ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಸಹಕಲಾವಿದರ ನಡುವೆ ‘ಗುರು’ ಎಂದೇ ಗೌರವಿಸಲ್ಪಟ್ಟಿದ್ದ ಗೋವಿಂದ ಭಟ್ ಅವರು ಆರಂಭದಲ್ಲಿ ಸ್ತ್ರೀಪಾತ್ರಗಳಲ್ಲಿಯೂ ಮಿಂಚಿ, ಬಳಿಕ ವಿವಿಧ ವೇಷಭೂಷಣಗಳಲ್ಲಿ ತನ್ನದೇ ಛಾಪು ಮೂಡಿಸಿದರು. ಕೌರವ ಪಾತ್ರ ಅವರಿಗೆ ವಿಶಿಷ್ಟ ಖ್ಯಾತಿ ತಂದುಕೊಟ್ಟಿತು. ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯ, ಹೆಗ್ಗಡೆ, ಗಣಮಣಿ, ಈಶ್ವರ, ಶ್ರೀದೇವಿ ಮಹಾತ್ಮ್ಯದ ರಕ್ತಬೀಜ, ದೇವೇಂದ್ರ, ಶತ್ರುಘ್ನ, ಕೀಚಕ, ದಕ್ಷ, ಮಾಗಧ, ಶಿಶುಪಾಲ ಸೇರಿದಂತೆ ಅನೇಕ ಪಾತ್ರಗಳನ್ನು ಅವಿಸ್ಮರಣೀಯವಾಗಿ ನಿರ್ವಹಿಸಿದ್ದರು.
ರಕ್ತಬೀಜ, ಇಂದ್ರಜಿತ್, ಭೀಷ್ಮ, ಕೌರವ ಮೊದಲಾದ ಪಾತ್ರಗಳ ಮೂಲಕ ಮನೆಮಾತಾಗಿದ್ದ ಅವರು, ಮಣಿಮೇಖಲೆ, ಕನಕರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಮೊದಲಾದ ಪ್ರಸಂಗಗಳನ್ನು ರಚಿಸಿದ್ದಾರೆ. ಸ್ಪಷ್ಟ ಉಚ್ಚಾರಣೆ, ಅರ್ಥಪೂರ್ಣ ವಾಕ್ಯಪ್ರಯೋಗ, ಶಿಸ್ತುಬದ್ಧ ನೃತ್ಯ ಹಾಗೂ ವಚೋವೈಖರಿ ಅವರ ಕಲಾತ್ಮಕತೆಗೂ ಮೆರಗು ತಂದಿತ್ತು.
ಅವರ ಕಲಾಸೇವೆಗೆ ಮಾನ್ಯತೆ ರೂಪವಾಗಿ 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಸನ್ಮಾನಗಳು ಸಂದಿವೆ.
1940ರ ಮಾರ್ಚ್ 22ರಂದು ಕಿನಿಲ ಶಂಕರನಾರಾಯಣ ಭಟ್ಟ ಮತ್ತು ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಅವರು ಕೋಡಪದವು, ವಿಟ್ಲದಲ್ಲಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದರು. 1966ರ ಏಪ್ರಿಲ್ 26ರಂದು ಸಾವಿತ್ರಿ ಅವರೊಂದಿಗೆ ವಿವಾಹವಾಗಿದ್ದು, ಮೂವರು ಪುತ್ರರು ಇದ್ದಾರೆ. ಪತ್ನಿ ಸಾವಿತ್ರಿ ಅವರು ಕೋವಿಡ್ ಸಂದರ್ಭದಲ್ಲೇ ನಿಧನರಾಗಿದ್ದರು.
ಬಾಲ್ಯದಲ್ಲೇ ಸಂಕಷ್ಟಗಳನ್ನು ಎದುರಿಸಿದ ಭಟ್ಟರು 1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಯಾಗಿ, ಕುರಿಯ ವಿಠಲ ಶಾಸ್ತ್ರಿ, ಪರಮಶಿವನ್, ಮಾಧವ ಮೆನನ್ ಹಾಗೂ ರಾಜನ್ ಅಯ್ಯರ್ ಅವರಿಂದ ನಾಟ್ಯಾಭ್ಯಾಸ ಪಡೆದಿದ್ದರು. ದೀರ್ಘಕಾಲದ ಕಲಾಸೇವೆಯಿಂದ ರಂಗಭೂಮಿಯ ರಾಜನಾಗಿ ಮೆರೆದ ಅವರು ಅನೇಕ ಯಕ್ಷಾಭಿಮಾನಿಗಳ ಹೃದಯಗಳಲ್ಲಿ ಅಜರಾಮರರಾಗಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!