ಪುತ್ತೂರು, ಮಾ.19: ಕಾಲು ಶಸ್ತ್ರಚಿಕಿತ್ಸೆಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯುವ ಕಾಂಗ್ರೆಸ್ ಮುಖಂಡ ಹಾಗೂ ಪಾಣಾಜೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಶ್ರೀಪ್ರಸಾದ್ ಅವರ ಮನೆಗೆ ಶಾಸಕ ಅಶೋಕ್ ರೈ ಅವರು ತಡರಾತ್ರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಮಾ.19ರಂದು ಸಂಜೆ 4 ಗಂಟೆಯಿಂದ ಪಾಣಾಜೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಭಾಗವಹಿಸಿದ್ದರು. ರಾತ್ರಿ ಸುಮಾರು 11 ಗಂಟೆಯವರೆಗೆ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಶ್ರೀಪ್ರಸಾದ್ ಕಾಣಿಸದಿರುವುದು ಶಾಸಕರ ಗಮನಕ್ಕೆ ಬಂದಿರಲಿಲ್ಲ. ಬಳಿಕ ಸ್ಥಳೀಯರೊಂದಿಗೆ ಮಾತನಾಡುವ ವೇಳೆ ಅವರು ಗೈರಾಗಿರುವ ಬಗ್ಗೆ ವಿಚಾರಿಸಿದಾಗ, ಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ತಿಳಿದುಬಂದಿತು.
ತಕ್ಷಣವೇ ಶಾಸಕ ಅಶೋಕ್ ರೈ ಅವರು ಶ್ರೀಪ್ರಸಾದ್ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ತಡರಾತ್ರಿ ಎನ್ನದೇ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ ಶಾಸಕರ ನಡೆಗೆ ಕಾಂಗ್ರೆಸ್ ಕಾರ್ಯಕರ್ತ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತು ಶ್ರೀಪ್ರಸಾದ್ ಪ್ರತಿಕ್ರಿಯಿಸಿ, “ಸಮಯವೇ ಅಡ್ಡಿಯಾಗಲಿಲ್ಲ… ತಾಯಿ ಹೃದಯದ ಕಾಳಜಿ ಮಾತ್ರ ಜೊತೆಗಿತ್ತು. ರಾತ್ರಿ ಹೊತ್ತಲ್ಲಿಯೂ ಬಂದು ನನ್ನ ಆರೋಗ್ಯ ವಿಚಾರಿಸಿದ ನಿಮ್ಮ ಮಾನವೀಯತೆ ನನ್ನ ಮನಸ್ಸನ್ನು ಸ್ಪರ್ಶಿಸಿದೆ. ನನ್ನ ನೋವನ್ನು ತಮ್ಮದೇ ಎಂದುಕೊಂಡ ನಿಮ್ಮ ಕಳಕಳಿ ನನಗೆ ಧೈರ್ಯ ಮತ್ತು ಆತ್ಮವಿಶ್ವಾಸ ನೀಡಿದೆ. ಇಂತಹ ಹೃದಯವಂತ ನಾಯಕತ್ವ ನಮ್ಮ ಭಾಗ್ಯ. ನಿಮ್ಮ ಅಪಾರ ಕಾಳಜಿಗೆ ಸದಾ ಕೃತಜ್ಞನಾಗಿರುತ್ತೇನೆ,” ಎಂದು ತಿಳಿಸಿದ್ದಾರೆ.














