ಪುತ್ತೂರು:  2ರಿಂದ 6 ವರ್ಷದ ಮಕ್ಕಳಿಗೆ ಜಾಗತಿಕ ಮಟ್ಟದ ಪ್ರಿ ಸ್ಕೂಲ್ ‘ಯೂರೋಕಿಡ್ಸ್’ ಮಾ. 21ರಂದು ದರ್ಬೆಯ ವಿಶಾಲಾ ಮಾರ್ಟ್ ಎದುರು ಉದ್ಘಾಟನೆಗೊಂಡಿತು.
ಶಾಸಕ ಅಶೋಕ್ ಕುಮಾರ್ ರೈ ಸಂಸ್ಥೆಯನ್ನು ಉದ್ಘಾಟಿಸಿದರು. ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು. ಕಕ್ಕಾಜೆ ಟ್ರಸ್ಟ್‌ನ ಸ್ಥಾಪಕ ಸದಸ್ಯ ಜಯರಾಮ್ ಅವರ ತಾಯಿ ಸುಮಿತ್ರ, ಸಂಸ್ಥೆಯ ಟ್ರಸ್ಟಿ ಮಂಜುಗೋಪಿನಾಥ್ ಅವರ ತಾಯಿ ಗೀತಾ ಹಾಗೂ ಜಯರಾಮ್–ಮಂಜುಗೋಪಿನಾಥ್ ದಂಪತಿಯ ಪುತ್ರಿ ವಿವಿಧ ವಿಭಾಗಗಳ ಕೊಠಡಿಗಳನ್ನು ಉದ್ಘಾಟಿಸಿದರು. ಬಳಿಕ ಕಕ್ಕಾಜೆ ಟ್ರಸ್ಟ್‌ನ ಸ್ಥಾಪಕ ಸುಧಾಮ ಕಕ್ಕಾಜೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, “ಆಟದ ಜೊತೆಗೆ ವಿದ್ಯಾಭ್ಯಾಸವೂ ಅಗತ್ಯ. ಮಕ್ಕಳ ಮೆದುಳಿನ ಬೆಳವಣಿಗೆಗೆ ಅನುಗುಣವಾಗಿ ಶಿಕ್ಷಣ ನೀಡುವ ಯೂರೋಕಿಡ್ಸ್ ಪುತ್ತೂರಿಗೆ ಬಂದಿರುವುದು ಸಂತೋಷಕರ. ಇಂತಹ ಸಂಸ್ಥೆಗಳು ನಗರದ ಬೆಳವಣಿಗೆಗೆ ಪೂರಕ,” ಎಂದರು. ಕಟ್ಟಡದ ಮಾಲಕ ಮಂಜುನಾಥ್ ನಾಯಕ್ ಸಂಸ್ಥೆ ಕಾರ್ಯಾರಂಭದ ದಿನದವರೆಗೆ ಬಾಡಿಗೆ ಪಡೆಯುವುದಿಲ್ಲವೆಂದು ತಿಳಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಮಕ್ಕಳಿಗೆ ಇಂಗ್ಲಿಷ್ ಜೊತೆಗೆ ಕನ್ನಡ, ತುಳು ಮೊದಲಾದ ಭಾಷೆಗಳೂ ಅಗತ್ಯವಾಗಿದ್ದು, ಬಹುಭಾಷಾ ಕಲಿಕೆಗೆ ಉತ್ತೇಜನ ನೀಡಬೇಕು ಎಂದರು.
ಹೇಮನಾಥ ಶೆಟ್ಟಿ ಮಾತನಾಡಿ, “2ರಿಂದ 6 ವರ್ಷದ ಮಕ್ಕಳಿಗೆ ಒತ್ತಡವಿಲ್ಲದ ಗುಣಮಟ್ಟದ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಯೂರೋಕಿಡ್ಸ್ ಈ ನಿರೀಕ್ಷೆಯನ್ನು ಪೂರೈಸಲಿದೆ,” ಎಂದರು.
ನ್ಯಾಯವಾದಿ ಮಹೇಶ್ ಕಜೆ, “ಮಕ್ಕಳ ಮನಸ್ಸಿನಲ್ಲಿ ಕಪಟವಿಲ್ಲ. ಅವರಿಗೆ ಶುದ್ಧ ವಾತಾವರಣದ ಶಿಕ್ಷಣ ಅಗತ್ಯ. ಯೂರೋಕಿಡ್ಸ್‌ನಲ್ಲಿ ಅದಕ್ಕೆ ಅವಕಾಶವಿದೆ,” ಎಂದರು.
ಶಿಕ್ಷಣ ಪ್ರೇಮಿ ಫಾರೂಕ್ ಬಾಯಬ್ಬೆ, “ದೇಶಾದ್ಯಂತ ಸಾವಿರಾರು ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಯೂರೋಕಿಡ್ಸ್ ಪುತ್ತೂರಲ್ಲಿಯೂ ಮಕ್ಕಳ ಚುರುಕುತನ ಹೆಚ್ಚಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಧಾಮ ಕಕ್ಕಾಜೆ, “ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವುದೇ ಸಂಸ್ಥೆಯ ಗುರಿ,” ಎಂದರು.
ಸಂಸ್ಥೆಯ ಟ್ರಸ್ಟಿ ಮಂಜುಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, “25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಯೂರೋಕಿಡ್ಸ್ 3 ದೇಶಗಳ 500ಕ್ಕೂ ಹೆಚ್ಚು ನಗರಗಳಲ್ಲಿ 1,700 ಕ್ಕೂ ಅಧಿಕ ಕೇಂದ್ರಗಳ ಮೂಲಕ 7 ಲಕ್ಷಕ್ಕೂ ಹೆಚ್ಚು ಮಕ್ಕಳ ಜೀವನಕ್ಕೆ ಬೆಳಕು ತಂದಿದೆ. ಇಲ್ಲಿ ಒತ್ತಡರಹಿತ, ಅನುಭವಾಧಾರಿತ ಶಿಕ್ಷಣಕ್ಕೆ ಆದ್ಯತೆ. ಸುರಕ್ಷಿತ ತರಗತಿಗಳು, ತರಬೇತಿ ಪಡೆದ ಶಿಕ್ಷಕರು ಮತ್ತು ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಜಾರಿಗೆ ಇವೆ,” ಎಂದರು.
ಯೂರೋಕಿಡ್ಸ್‌ನಲ್ಲಿ 2ರಿಂದ 3 ವರ್ಷದ ಮಕ್ಕಳಿಗೆ ಪ್ಲೇ ಗ್ರೂಪ್, 3ರಿಂದ 4 ವರ್ಷದ ಮಕ್ಕಳಿಗೆ ನರ್ಸರಿ, 4ರಿಂದ 5 ವರ್ಷದ ಮಕ್ಕಳಿಗೆ ಯೂರೋ ಜ್ಯೂನಿಯರ್, 5ರಿಂದ 6 ವರ್ಷದ ಮಕ್ಕಳಿಗೆ ಯೂರೋ ಸೀನಿಯರ್ ವಿಭಾಗಗಳಲ್ಲಿ ತರಗತಿಗಳು ನಡೆಯಲಿವೆ. ಬೌದ್ಧಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಮುಖ್ಯ ಅತಿಥಿಯಾಗಿ ಕಟ್ಟಡದ ಮಾಲಕರೂ ಆಗಿರುವ ಮಂಜುನಾಥ್ ನಾಯಕ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು. ಕಕ್ಕಾಜೆ ಟ್ರಸ್ಟ್‌ನ ಸದಸ್ಯ ಜಯರಾಮ್ ಹಾಗೂ ಸಂಸ್ಥೆಯ ಪುಟಾಣಿಗಳು ಅತಿಥಿಗಳನ್ನು ಗೌರವಿಸಿದರು. ಗೌತಮಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಅನುಪಮ ಕಾರ್ಯಕ್ರಮ ನಿರೂಪಿಸಿದರು. ವೃಂದರಾವ್ ವಂದಿಸಿದರು.
ಶಿಕ್ಷಕ ಅಬ್ರಹಾಂ, ಪುರುಷೋತ್ತಮ, ಲಯನ್ಸ್ ಕ್ಲಬ್ ಅಧ್ಯಕ್ಷೆ ವೇದಾವತಿ, ರಾಜೇಶ್, ರವಿಪ್ರಸಾದ್ ಶೆಟ್ಟಿ, ಅಬೂಬಕ್ಕರ್ ಮುಲಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!