ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ (Middel East War) ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಕೆಲವು ಹೋಟೆಲ್‌ಗಳು ಗ್ರಾಹಕರಿಂದ ‘ಗ್ಯಾಸ್ ಸರ್‌ಚಾರ್ಜ್’ (Gas Surcharge) ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿಬಂದಿವೆ.
ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಹೋಟೆಲ್ ಬಿಲ್‌ನಲ್ಲಿ ಆಹಾರದ ಬೆಲೆಯ ಹೊರತಾಗಿ ಹೆಚ್ಚುವರಿಯಾಗಿ ಗ್ಯಾಸ್ ಅಥವಾ ಇಂಧನ ಸರ್‌ಚಾರ್ಜ್ ವಿಧಿಸುವುದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಗ್ಯಾಸ್ ಕೊರತೆಯನ್ನು ನೆಪವಾಗಿಟ್ಟುಕೊಂಡು ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಸರ್ಕಾರ ಹೇಳಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಾಣಿಜ್ಯ ಎಲ್‌ಪಿಜಿ ಪೂರೈಕೆಯು ಶೇ. 30 ಕ್ಕೆ ಕುಸಿದಿತ್ತು, ಇದರಿಂದಾಗಿ ರಾಜ್ಯದ ಹಲವು ಹೋಟೆಲ್‌ಗಳು ಮುಚ್ಚುವ ಅಥವಾ ಸೌದೆ ಒಲೆ ಬಳಸುವ ಸ್ಥಿತಿಗೆ ತಲುಪಿದ್ದವು. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಹೋಟೆಲ್‌ಗಳಿಗೆ ಶೇ. 50 ರಷ್ಟು ಗ್ಯಾಸ್ ಪೂರೈಕೆಯನ್ನು ಪುನರಾರಂಭಿಸಲು ಆದೇಶಿಸಿದೆ.
ಪರಿಸ್ಥಿತಿ ಸುಧಾರಿಸುತ್ತಿದ್ದರೂ ಸಹ ಕೆಲವು ಹೋಟೆಲ್‌ಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಆದೇಶವನ್ನು ಉಲ್ಲಂಘಿಸುವ ಹೋಟೆಲ್‌ಗಳ ವಿರುದ್ಧ ದಂಡ ವಿಧಿಸುವುದು ಅಥವಾ ಪರವಾನಗಿ ರದ್ದುಗೊಳಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.














