ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ (LPG) ಕೊರತೆ ಎದುರಾಗಿದೆ ಎಂಬ ವರದಿಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಗುರುವಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಇಂತಹ ಸುದ್ದಿ ಜನರಲ್ಲಿ ಅನಾವಶ್ಯಕ ಆತಂಕ ಉಂಟುಮಾಡಿ ಅತಿಯಾದ ಖರೀದಿಗೆ ಪ್ರಚೋದಿಸುವ ಉದ್ದೇಶಪೂರ್ವಕ ಅಪಪ್ರಚಾರ ಎಂದು ಸಚಿವಾಲಯ ಕಿಡಿಕಾರಿದೆ.
ಮಧ್ಯಪ್ರಾಚ್ಯದ ಉದ್ವಿಗ್ನತೆ 27ನೇ ದಿನಕ್ಕೆ ಕಾಲಿಟ್ಟಿದ್ದರೂ, ಭಾರತದ ಇಂಧನ ಭದ್ರತೆ ಗಟ್ಟಿಯಾಗಿದ್ದು ಯಾವುದೇ ಕೊರತೆ ಉಂಟಾಗುವ ಪರಿಸ್ಥಿತಿ ಇಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಪ್ರಸ್ತುತ ದೇಶದ ಬಳಿ ಕಚ್ಚಾ ತೈಲ, ಸಂಸ್ಕರಿಸಿದ ಇಂಧನ ಉತ್ಪನ್ನಗಳು ಹಾಗೂ ಆಯಕಟ್ಟಿನ ಭೂಗತ ಸಂಗ್ರಹ ಸೇರಿ ಒಟ್ಟು 60 ದಿನಗಳಿಗೆ ಸಾಕಾಗುವಷ್ಟು ದಾಸ್ತಾನು ಲಭ್ಯವಿದೆ. ಮುಂದಿನ ಎರಡು ತಿಂಗಳಿಗೆ ಅಗತ್ಯವಿರುವ ಕಚ್ಚಾ ತೈಲ ಪೂರೈಕೆಯನ್ನು ತೈಲ ಕಂಪನಿಗಳು ಈಗಾಗಲೇ ಖಚಿತಪಡಿಸಿಕೊಂಡಿವೆ ಎಂದು ತಿಳಿಸಲಾಗಿದೆ.
ವಿಶ್ವದ ನಾಲ್ಕನೇ ಅತಿದೊಡ್ಡ ರಿಫೈನರ್ ಆಗಿರುವ ಭಾರತವು 150ಕ್ಕೂ ಹೆಚ್ಚು ದೇಶಗಳಿಗೆ ಇಂಧನ ರಫ್ತು ಮಾಡುತ್ತಿದೆ. ದೇಶದ ಎಲ್ಲಾ ತೈಲ ಸಂಸ್ಕರಣಾಗಾರಗಳು ಶೇ.100ಕ್ಕಿಂತ ಹೆಚ್ಚು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಹೊರ್ಮುಜ್ ಜಲಸಂಧಿ ಸುತ್ತಲಿನ ಜಾಗತಿಕ ಉದ್ವಿಗ್ನತೆಯ ನಡುವೆಯೂ ಭಾರತವು ಪರ್ಯಾಯ ಮೂಲಗಳಿಂದ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಪಡೆಯುತ್ತಿದೆ. ಇದರಿಂದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಎಲ್‌ಪಿಜಿ ಉತ್ಪಾದನೆಯೂ ಹೆಚ್ಚಳಗೊಂಡಿದ್ದು, ಆಮದು ಅವಲಂಬನೆ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.
ದೇಶದ ಯಾವುದೇ ಭಾಗದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ರೇಷನಿಂಗ್ (ಸೀಮಿತ ಮಾರಾಟ) ಜಾರಿಯಲ್ಲಿಲ್ಲ. ಎಲ್ಲ ಪಂಪ್‌ಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬಾರದು. ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.














