ವಿಟ್ಲ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಇಟ್ಟಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿ, 679.38 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಆಹಾರ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ ಅವರಿಗೆ ಮೇ 9ರಂದು ಬೆಳಿಗ್ಗೆ ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಆಟೋರಿಕ್ಷಾವೊಂದರಲ್ಲಿ ಪಡಿತರ ಅಕ್ಕಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಕಚೇರಿ ಸಿಬ್ಬಂದಿ ಹಾಗೂ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದರು.
ಅಲ್ಲಿ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಕೆಎ-70-ಎ-2034 ಸಂಖ್ಯೆಯ ಆಟೋರಿಕ್ಷಾದಲ್ಲಿ 15 ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಿರುವುದು ಪತ್ತೆಯಾಯಿತು. ಸ್ಥಳದಲ್ಲಿದ್ದ ವಿಟ್ಲ ಕಸಬಾ ನಿವಾಸಿ ಅಲಿ ಅಕ್ಬರ್ (40) ಅವರನ್ನು ವಿಚಾರಿಸಿದಾಗ, ಅಕ್ಕಿಯನ್ನು ತಾನೇ ಅಕ್ರಮವಾಗಿ ದಾಸ್ತಾನು ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪರಿಶೀಲನೆ ವೇಳೆ 15 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 679.38 ಕೆಜಿ ತೂಕದ ಪಡಿತರ ಅಕ್ಕಿ ಇದ್ದು, ಅದರ ಅಂದಾಜು ಮೌಲ್ಯ ₹23,098 ಎಂದು ತಿಳಿದುಬಂದಿದೆ. ಅಕ್ಕಿಯನ್ನು ವಶಪಡಿಸಿಕೊಂಡು, ವಿಟ್ಲ ಪೊಲೀಸ್ ಠಾಣೆಯಲ್ಲಿ ಅವಶ್ಯಕ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016ರ ಕಲಂ 18ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.














