ಬಂಟ್ವಾಳ, ಜು.17: ಬಿಸಿರೋಡ್‌ನಲ್ಲಿ ನಡೆದ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ, “ಭಜರಂಗ ದಳದ ಮುಖಂಡ ಚೇತನ” ಹಾಗೂ “ಭಜರಂಗ ದಳದ ಶಾಖೆಯಿಂದ ತರಬೇತಿ ಪಡೆದಿದ್ದ” ಎಂಬ ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಸೌಹಾರ್ದತೆ ಕದಡುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್‌ನ (ವಿಹಿಂಪ) ಉಪಾಧ್ಯಕ್ಷ ಕೇಶವ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರಿನ ಪ್ರಕಾರ, ಆರೋಪಿಯ ತಿರುಚಿದ ಭಾವಚಿತ್ರ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸ್‌ಆಪ್ ಗುಂಪುಗಳು ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ವ್ಯಾಪಕವಾಗಿ ಹಂಚಲಾಗಿದ್ದು, ಇದರಿಂದ ಸಮಾಜದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿ ಶಾಂತಿ ಭಂಗವಾಗುವ ಹಾಗೂ ಗಲಭೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.ಈ ರೀತಿಯ ಸುಳ್ಳು ಮತ್ತು ಪ್ರಚೋದನಕಾರಿ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದವರನ್ನು ಪತ್ತೆಹಚ್ಚಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.ಈ ದೂರಿನ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.







