ಪುತ್ತೂರು, ಜು. 18: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಸತ್ಯಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣಪುಟ್ಟ ತಪ್ಪುಗಳನ್ನು ವೈಭವೀಕರಿಸುವುದರ ಜೊತೆಗೆ ಸಮಾಜದಲ್ಲಿರುವ ಉತ್ತಮ ಸಂಗತಿಗಳನ್ನೂ ಪ್ರಚಾರ ಮಾಡುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ವಿಶೇಷ ಉಪನ್ಯಾಸ, ಬಿ.ಟಿ. ರಂಜನ್ ಪ್ರಶಸ್ತಿ ಪ್ರದಾನ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬರಲಿದ್ದು, ಇದರಿಂದ ಸುಮಾರು 25 ಸಾವಿರ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಪುತ್ತೂರಿನಲ್ಲಿ ಶಾಂತಿಯುತ ವಾತಾವರಣ ಅಗತ್ಯವಾಗಿದ್ದು, ಅದರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.ಪತ್ರಿಕಾ ಭವನದ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲಾಗಿದ್ದು, ಅಗತ್ಯವಿದ್ದರೆ ಇನ್ನಷ್ಟು ನೆರವು ನೀಡುವುದಾಗಿ ಭರವಸೆ ನೀಡಿದರು.ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಜಯ್ ಶಾಸ್ತ್ರಿ ಅವರು “ಆಧುನಿಕ ಮಾಧ್ಯಮ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಎಐ ಬಳಕೆ ಉತ್ಪಾದಕತೆ ಹೆಚ್ಚಿಸಿದರೂ ಮಾನವ ಬುದ್ಧಿಮತ್ತೆ ಕುಗ್ಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿ ಖಾದರ್ ಶಾ, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ಇಂದಾಜೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು.ಬಿ.ಟಿ. ರಂಜನ್ ಪ್ರಶಸ್ತಿ ಪ್ರದಾನಈ ವರ್ಷದಿಂದ ಆರಂಭಿಸಲಾದ ಬಿ.ಟಿ. ರಂಜನ್ ಪ್ರಶಸ್ತಿ-2026ಯನ್ನು ವಿಜಯ ಕರ್ನಾಟಕದ ಬೆಳ್ತಂಗಡಿ ವರದಿಗಾರ ಅರವಿಂದ ಹೆಬ್ಬಾರ್ ಮುಂಡಾಜೆ ಅವರಿಗೆ ಶಾಸಕ ಅಶೋಕ್ ರೈ ಪ್ರದಾನಿಸಿದರು. ಪ್ರಶಸ್ತಿಯು ಸನ್ಮಾನಪತ್ರ, ಶಾಲು, ಹಾರ, ಫಲಪುಷ್ಪ ಹಾಗೂ ₹5,000 ನಗದು ಒಳಗೊಂಡಿದೆ.ಸಾಧಕರಿಗೆ ಸನ್ಮಾನಪತ್ರಿಕಾ ವಿತರಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ರಾಹಿಂ ನೆಕ್ಕಿಲಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಶ್ರೀನಿಕಾ ರೈ ಸಿ.ಎಚ್., ಹಿರಿಯ ಪತ್ರಕರ್ತರಾದ ಶೇಖ್ ಜೈನುದ್ದೀನ್, ಕರುಣಾಕರ ರೈ ಸಿ.ಎಚ್. ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಸ್ವಾಗತಿಸಿ ವಂದಿಸಿದರು. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







