ಬೆಳ್ತಂಗಡಿ: ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.ಪೊಲೀಸರ ಮಾಹಿತಿ ಪ್ರಕಾರ, ಎಡಮಂಗಲದ ನಿವಾಸಿ ಹಾಗೂ ಹಾಸ್ಟೆಲ್ ವಾರ್ಡನ್ ಅವಿನ್ ಕುಮಾರ್ ಬಿ. ಅವರು ನೀಡಿದ ದೂರಿನಂತೆ, ಜು. 31ರಂದು ಬೆಳಿಗ್ಗೆ ಸುಮಾರು 11.40ರ ವೇಳೆಗೆ ವಿದ್ಯಾರ್ಥಿ ಮದನ್ ರೆಡ್ಡಿ ಹೊಟ್ಟೆನೋವು ಹಾಗೂ ವಾಂತಿ ಆಗುತ್ತಿರುವುದಾಗಿ ತಿಳಿಸಿ ವಿಶ್ರಾಂತಿ ಪಡೆಯಲು ಅನುಮತಿ ಕೇಳಿದ್ದಾನೆ. ವಾರ್ಡನ್ ಅವರು ಪ್ರಾಂಶುಪಾಲರಿಂದ ಅನುಮತಿ ಪಡೆದು ವಿಶ್ರಾಂತಿಗೆ ತೆರಳುವಂತೆ ಸೂಚಿಸಿದ್ದರು.ಬಳಿಕ ಮಧ್ಯಾಹ್ನ ಸುಮಾರು 12.30ರ ವೇಳೆಗೆ ವಿಶ್ರಾಂತಿ ಕೊಠಡಿಗೆ ತೆರಳಿ ನೋಡಿದಾಗ ವಿದ್ಯಾರ್ಥಿ ಅಲ್ಲಿ ಇರಲಿಲ್ಲ. ನಂತರ ಆತನ ಕೊಠಡಿಗೆ ತೆರಳಿದಾಗ ಬಾಗಿಲು ಒಳಗಿನಿಂದ ಗೋದ್ರೇಜ್ ಅಲ್ಮಾರಿಯಿಂದ ಅಡ್ಡಗಟ್ಟಲಾಗಿತ್ತು. ಬಾಗಿಲನ್ನು ಬಲವಂತವಾಗಿ ತೆರೆದು ನೋಡಿದಾಗ, ಕೊಠಡಿಯ ಸೀಲಿಂಗ್ ಫ್ಯಾನಿಗೆ ನೈಲಾನ್ ಹಗ್ಗ ಕಟ್ಟಿ ಮದನ್ ರೆಡ್ಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.ಘಟನೆಯ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 41/2026ರಡಿ ಬಿಎನ್‌ಎಸ್‌ಎಸ್-2023ರ ಕಲಂ 194ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!