ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಈ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಮತದಾರರ ಹೆಸರು ಪಟ್ಟಿಯಿಂದ ಹೊರಬೀಳುವ ಸಾಧ್ಯತೆ ಕಂಡುಬಂದಿದೆ. ಮನೆ ಮನೆ ಪರಿಶೀಲನೆಯ ಅವಧಿಯನ್ನು ಚುನಾವಣಾ ಆಯೋಗವು ಆಗಸ್ಟ್ 17ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಇದರ ಮಧ್ಯೆ, ನಗರದ ಸುಮಾರು 49 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 1.3 ಕೋಟಿ ಮತದಾರರಿದ್ದಾರೆ. ಇವರಲ್ಲಿ ಮೃತಪಟ್ಟವರು, ಬೇರೆಡೆಗೆ ವಾಸಸ್ಥಳ ಬದಲಾಯಿಸಿದವರು (ಶಿಫ್ಟ್ ಆದವರು), ಈಗಾಗಲೇ ಬೇರೆಡೆ ನೋಂದಣಿಯಾಗಿರುವವರು ಹಾಗೂ ಶಾಶ್ವತವಾಗಿ ನಗರ ತೊರೆದವರ ಸಂಖ್ಯೆಯನ್ನು ಪ್ರತ್ಯೇಕವಾಗಿ ಗುರುತಿಸಲಾಗಿದ್ದು, ಈ ಸಂಖ್ಯೆ ಬರೋಬ್ಬರಿ 49 ಲಕ್ಷಕ್ಕೆ ತಲುಪಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹೆಸರುಗಳು ಕಡಿತಗೊಳ್ಳುವ ಸಾಧ್ಯತೆ ಇರುವುದನ್ನು ಚುನಾವಣಾ ಆಯೋಗವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಯಾವುದೇ ಅರ್ಹ ಮತದಾರರ ಹಕ್ಕು ಮೊಟಕಾಗಬಾರದು ಎಂಬ ಉದ್ದೇಶದಿಂದ ಆಯೋಗವು ತೀವ್ರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಎಡಿಎಸ್‌ಎಸ್‌ಒ (ADSSO – Absent, Shifted, Dead, Duplicate, Permanently Shifted) ಎಂದು ಗುರುತಿಸಲಾಗಿರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ಮಾರ್ಕ್ ಮಾಡಿ, ಸ್ಥಳದಲ್ಲೇ ಮಹಜರು ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಎರಡೆರಡು ಬಾರಿ ಕೂಲಂಕುಷವಾಗಿ ಪರಿಶೀಲನೆ (ಡಬಲ್ ಮಾರ್ಕಿಂಗ್) ನಡೆಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.










