ರಾಮಕುಂಜ: ಕೊಯಿಲ ಗ್ರಾಮದ ಕುದುಲೂರು ನಿವಾಸಿ, ರಿಕ್ಷಾ ಚಾಲಕ ಗುರುಪ್ರಸಾದ್ (35) ಅವರು ಆ.22ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.ಗೋಳಿತ್ತಡಿ ಪೇಟೆಯಲ್ಲಿ ರಿಕ್ಷಾ ಓಡಿಸುತ್ತಿದ್ದ ಗುರುಪ್ರಸಾದ್, ಸಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿದಿನ ರಿಕ್ಷಾದಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು. ಆ.22ರಂದು ಶಾಲೆಗೆ ಮಕ್ಕಳನ್ನು ಕರೆತರಲು ಮನೆಯಿಂದ ಹೊರಡುವ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಮಿಲಾದ್ ಕಾರ್ಯಕ್ರಮ ಮುಂದೂಡಿಕೆ:ಗುರುಪ್ರಸಾದ್ ಅವರ ಮನೆ ಕುದುಲೂರು ಮುಬಾರಕ್ ಜುಮಾ ಮಸೀದಿ ಬಳಿಯೇ ಇದ್ದು, ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಆ.22ರಂದು ಮಿಲಾದ್ ನಬಿ ಪ್ರಯುಕ್ತ ನಡೆಯಬೇಕಿದ್ದ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಮುಂದೂಡಲಾಯಿತು. ಮೃತರ ಕುಟುಂಬದ ದುಃಖದಲ್ಲಿ ಭಾಗಿಯಾಗಿ ಕಾರ್ಯಕ್ರಮ ಮುಂದೂಡುವ ಮೂಲಕ ಮಸೀದಿ ಆಡಳಿತ ಮಂಡಳಿ ಸೌಹಾರ್ದತೆ ಮೆರೆದಿದೆ.











