ಪುತ್ತೂರು: ಪಕ್ಷದ ಸಂಘಟನೆ ಹಾಗೂ ಕ್ಷೇತ್ರ ಪ್ರಚಾರಕ್ಕೆ ಅನುಕೂಲವಾಗುವಂತೆ ಪುತ್ತೂರಿಗೆ ಬ್ಲಾಕ್ ಕಾಂಗ್ರೆಸ್ ವಾಹನ ಒದಗಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಬ್ಲಾಕ್ ಅಧ್ಯಕ್ಷರಿಗೆ ವಾಹನ ಒದಗಿಸಲಾಗಿದ್ದು, ಇದು ಪಕ್ಷದ ಬೆಳವಣಿಗೆ ಹಾಗೂ ಸಂಘಟನೆಗೆ ಬಳಕೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಪುತ್ತೂರಿಗೆ ಬಂದ ಬೊಲೆರೋ ವಾಹನಕ್ಕೆ ‘ಬ್ಲಾಕ್ ಕಾಂಗ್ರೆಸ್ ವಾಹನ’ ಎಂದು ನಾಮಕರಣ ಮಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹಾಗೂ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರಿಗೆ ವಾಹನದ ಕೀಯನ್ನು ಶಾಸಕ ಅಶೋಕ್ ರೈ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಸ್ವಂತ ಜಾಗದಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಬೇಕು ಎಂಬುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಲ್ಪನೆಯಾಗಿದೆ. ಅದರಂತೆ ಪುತ್ತೂರು ಬಸ್ ನಿಲ್ದಾಣದ ಬಳಿ ಸುಮಾರು 20 ಸಾವಿರ ಚದರ ಅಡಿ ವಿಸ್ತೀರ್ಣದ ಕಾಂಗ್ರೆಸ್ ಭವನ ನಿರ್ಮಾಣ ಹಂತದಲ್ಲಿದೆ. ರಾಜ್ಯದ ವಿವಿಧೆಡೆ ಕಾಂಗ್ರೆಸ್ ಭವನಗಳು ನಿರ್ಮಾಣ ಹಂತಕ್ಕೆ ಬರುವ ಸಂದರ್ಭದಲ್ಲೇ ಪುತ್ತೂರಿನಲ್ಲಿ ಭವನ ಉದ್ಘಾಟನೆಯಾಗಲಿದೆ ಎಂದರು.ಎಲ್ಲಾ ಬ್ಲಾಕ್‌ಗಳಿಗೂ ವಾಹನ ಒದಗಿಸಬೇಕುರಾಜ್ಯದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಘಟಕಗಳಿಗೂ ವಾಹನ ಒದಗಿಸಿ, ಅಧ್ಯಕ್ಷರಿಗೆ ಕ್ಷೇತ್ರದಲ್ಲಿ ಪಕ್ಷದ ಪ್ರಚಾರ ಹಾಗೂ ಸಂಘಟನಾ ಚಟುವಟಿಕೆ ನಡೆಸಲು ಅನುಕೂಲ ಮಾಡಿಕೊಡಬೇಕು. ಪಕ್ಷದ ಸಂಘಟನೆಯ ದೃಷ್ಟಿಯಿಂದ ಈ ವಾಹನವನ್ನು ತರಿಸಲಾಗಿದೆ ಎಂದು ಅಶೋಕ್ ರೈ ಹೇಳಿದರು.ಮೂರು ಬ್ಲಾಕ್‌ಗಳಿಗೆ ಸದ್ಯ ಒಂದೇ ವಾಹನಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಘಟಕಗಳಿಗೆ ಸದ್ಯ ಈ ವಾಹನವನ್ನು ಬಳಸಲಾಗುತ್ತದೆ. ಶಾಸಕರು ಯಾವ ಕ್ಷೇತ್ರ ವ್ಯಾಪ್ತಿಗೆ ತೆರಳುತ್ತಾರೋ, ಆ ಸಂದರ್ಭದಲ್ಲಿ ಆಯಾ ಬ್ಲಾಕ್ ಅಧ್ಯಕ್ಷರು ವಾಹನವನ್ನು ಬಳಸಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.‘ಕಾಂಗ್ರೆಸ್‌ನಲ್ಲಿ ನಾನಿನ್ನೂ ಮಗು’‘ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಮೂರುವರೆ ವರ್ಷಗಳಾಗಿವೆ. ಪಕ್ಷಕ್ಕೆ ನಾನು ದೊಡ್ಡ ಮಟ್ಟದ ಕೊಡುಗೆ ನೀಡಿದ್ದೇನೆ ಎಂಬ ಭಾವನೆ ನನಗಿಲ್ಲ. ಕಾಂಗ್ರೆಸ್ ಭವನ ಹಾಗೂ ಬ್ಲಾಕ್ ಅಧ್ಯಕ್ಷರಿಗೆ ವಾಹನ ನೀಡಲು ಸಾಧ್ಯವಾಗಿರುವುದು ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರ ಆಶೀರ್ವಾದದ ಫಲ’ ಎಂದು ಅಶೋಕ್ ರೈ ಹೇಳಿದರು.ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಹಾಗೂ ಸಂಘಟನೆಗಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ಕೆಲಸ ಮಾಡಬೇಕು. ಪಕ್ಷದಿಂದ ನಮಗೆ ಏನು ಸಿಕ್ಕಿದೆ ಎಂಬುದಕ್ಕಿಂತ ನಾವು ಪಕ್ಷಕ್ಕೆ ಏನು ನೀಡಿದ್ದೇವೆ ಎಂಬುದನ್ನು ಯೋಚಿಸಬೇಕು. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅನಿವಾರ್ಯತೆ ಏಕೆ ಇದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು, ಕಾಂಗ್ರೆಸ್ ಪಕ್ಷವಿದ್ದಲ್ಲಿ ಮಾತ್ರ ಬಡವರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬ ವಿಚಾರವನ್ನು ಪ್ರತೀ ಮನೆಗೂ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದರು.ವಿಟ್ಲ, ಉಪ್ಪಿನಂಗಡಿಯಲ್ಲೂ ಕಾಂಗ್ರೆಸ್ ಭವನಪುತ್ತೂರಿನಲ್ಲಿ ನಿರ್ಮಾಣವಾಗುತ್ತಿರುವ ರೀತಿಯಲ್ಲೇ ವಿಟ್ಲ ಹಾಗೂ ಉಪ್ಪಿನಂಗಡಿಯಲ್ಲೂ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ. ವಿಟ್ಲದಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದ್ದು, ಉಪ್ಪಿನಂಗಡಿಯಲ್ಲಿ ಜಾಗ ಹುಡುಕಾಟ ನಡೆಯುತ್ತಿದೆ ಎಂದು ಅಶೋಕ್ ರೈ ತಿಳಿಸಿದರು.ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶಾಸಕ ಅಶೋಕ್ ರೈ ಅವರು ಪಕ್ಷದ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಸುಮಾರು ₹2 ಕೋಟಿ ವೆಚ್ಚದಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗುತ್ತಿರುವುದು ನಮ್ಮ ನಿರೀಕ್ಷೆಗೂ ಮೀರಿದ ಸಾಧನೆಯಾಗಿದೆ. ಇದೀಗ ಪಕ್ಷದ ಸಂಘಟನೆಗಾಗಿ ವಾಹನ ಕೂಡ ಬಂದಿದ್ದು, ಇದರ ಸದುಪಯೋಗವಾಗಲಿ ಎಂದು ಶುಭ ಹಾರೈಸಿದರು.ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಪಕ್ಷದ ಚಟುವಟಿಕೆಗಳಿಗೆ ಪೂರಕವಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಲಾಕ್ ಕಾಂಗ್ರೆಸ್‌ಗೆ ವಾಹನ ಬಂದಿದೆ. ಒಂದು ಕಡೆ ಪಕ್ಷದ ಭವನ ನಿರ್ಮಾಣವಾಗುತ್ತಿದ್ದು, ಮತ್ತೊಂದೆಡೆ ಶಾಸಕ ಅಶೋಕ್ ರೈ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಮೂರು ಬ್ಲಾಕ್‌ಗಳಿಗೂ ಈ ವಾಹನ ಸದ್ಬಳಕೆಯಾಗಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ್ ರೈ ಮಟಂತಬೆಟ್ಟು, ಪುಡಾ ಸದಸ್ಯ ನಿಹಾಲ್ ಪಿ. ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಉದ್ಯಮಿ ಸಿಯಾನ್ ದರ್ಬೆ, ವಿಕ್ರಂ ರೈ ಸಾಂತ್ಯ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.











