ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು ಇದರ ಆಶ್ರಯದಲ್ಲಿ ‘ಪುತ್ತೂರುದ ಪಿಲಿಗೊಬ್ಬು–2026 ಸೀಸನ್–4’ ಕಾರ್ಯಕ್ರಮ ಅ.17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯಾದ ಹುಲಿವೇಷ ಕಲೆಯನ್ನು ಉಳಿಸಿ ಬೆಳೆಸುವುದು ಹಾಗೂ ಯುವ ಸಮುದಾಯದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕಲೆಯ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸೀಸನ್–4ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಹುಲಿವೇಷ ತಂಡಗಳು ಭಾಗವಹಿಸಲಿವೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಫುಡ್ ಫೆಸ್ಟ್ ಕೂಡ ಆಯೋಜಿಸಲಾಗಿದೆ.ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಪಿಲಿಗೊಬ್ಬು ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.











