ಪುತ್ತೂರು: ದರ್ಬೆಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಾಕ್ಷ್ಯಾಧಾರಗಳು ಹಾಗೂ ಕಾನೂನು ಪ್ರಕಾರ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಲ್ಯಾಮಿನೇಶನ್ ಯಂತ್ರದಲ್ಲಾದ ತಾಂತ್ರಿಕ ದೋಷದಿಂದ ದಾಖಲೆಯೊಂದು ಹಾನಿಗೊಳಗಾದ ಘಟನೆ ಬಳಿಕ ಗಲಾಟೆ ಉಂಟಾಗಿದ್ದು, ಪ್ರಕರಣಕ್ಕೆ ಕೋಮು ಬಣ್ಣ ನೀಡುವ ಪ್ರಯತ್ನ ನಡೆಯುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲೇ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಾಗಿತ್ತು ಅಥವಾ ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆ, ಕಾನೂನು ವ್ಯವಸ್ಥೆ ಅಥವಾ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಬಹುದಾಗಿತ್ತು ಎಂದು ತಿಳಿಸಿದ್ದಾರೆ.ಘಟನೆಯ ವೇಳೆ ಗ್ರಾಹಕರು ಅಂಗಡಿ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿದ್ದು, ಅಂಗಡಿ ಮಾಲೀಕರಾದ ಅಂಜನಾ ಪೈ ಅವರೂ ಗಲಾಟೆಯಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಪರಿಶೀಲಿಸಲಾಗುತ್ತಿದೆ. ಸುದರ್ಶನ್ ಪೈ ಮಧ್ಯಪ್ರವೇಶಿಸಿ ಘಟನೆಯನ್ನು ವೀಡಿಯೊ ಚಿತ್ರೀಕರಿಸಲು ಯತ್ನಿಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ವೀಡಿಯೊ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸುದರ್ಶನ್ ಪೈ ಅವರನ್ನು ಪೊಲೀಸ್ ವಶಕ್ಕೆ ಪಡೆದ ಬಳಿಕವೂ ಕೆಲವರು ಅತಿರೇಕದಿಂದ ವರ್ತಿಸಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ನೌಶಾದ್ ಎಂಬಾತ ಪೊಲೀಸ್ ವಾಹನದ ಬಳಿ ತೆರಳಿ ಮಾಡಿರುವ ಕೃತ್ಯದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ವಾಹನದಲ್ಲಿದ್ದ ಸುದರ್ಶನ್ ಪೈ ಅವರ ತಂದೆ ಸೇರಿದಂತೆ ಸಂಬಂಧಪಟ್ಟವರ ವಿಚಾರಣೆ ಹಾಗೂ ಲಭ್ಯವಿರುವ ಇತರ ಸಾಕ್ಷ್ಯಾಧಾರಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.ಸುದರ್ಶನ್ ಪೈ, ನೌಶಾದ್, ಸದಾಶಿವ ಪೈ ಸೇರಿದಂತೆ ಕೆಲವರ ವಿರುದ್ಧ ಈ ಹಿಂದೆ ವಿವಿಧ ಪ್ರಕರಣಗಳು ದಾಖಲಾಗಿರುವ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಆದರೆ ಹಳೆಯ ಪ್ರಕರಣಗಳ ಆಧಾರದಲ್ಲಿ ಪ್ರಸ್ತುತ ಪ್ರಕರಣದಲ್ಲಿ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಸಕ್ತ ಘಟನೆಯಲ್ಲಿ ದೊರೆಯುವ ಸಾಕ್ಷ್ಯಾಧಾರ, ನೈಜ ಸತ್ಯಾಂಶ ಹಾಗೂ ಅನ್ವಯವಾಗುವ ಕಾನೂನು ನಿಬಂಧನೆಗಳ ಆಧಾರದಲ್ಲೇ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.ನೌಶಾದ್, ನಿಯಾಜ್, ಅಂಜನಾ ಪೈ, ಸದಾಶಿವ ಪೈ ಸೇರಿದಂತೆ ಇತರರನ್ನು ಬಂಧಿಸಬೇಕೆಂಬ ಆಗ್ರಹಗಳ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟರೆ ಧರ್ಮ, ಸಮುದಾಯ ಅಥವಾ ಸಾಮಾಜಿಕ ಗುರುತನ್ನು ಲೆಕ್ಕಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಪ್ರಕರಣದ ತನಿಖೆಯ ಬಗ್ಗೆ ಯಾರಿಗಾದರೂ ಸಂದೇಹಗಳಿದ್ದಲ್ಲಿ ತಮ್ಮಲ್ಲಿರುವ ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಬಹುದು. ಘಟನೆಗೆ ಕೋಮು ಬಣ್ಣ ನೀಡಿ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವ ಪ್ರಯತ್ನಗಳಿಗೆ ಸಾರ್ವಜನಿಕರು ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋದನಕಾರಿ ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ಪರಿಶೀಲಿಸದೆ ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.ಇಂದು ಶಾಂತಿ ಸಭೆ: ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ.23ರಂದು ಸಂಜೆ 5 ಗಂಟೆಗೆ ಪುತ್ತೂರು ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ. ಎಲ್ಲರೂ ಸಭೆಯಲ್ಲಿ ಭಾಗವಹಿಸಿ ತಮ್ಮ ಕಳವಳ ಹಾಗೂ ಅಭಿಪ್ರಾಯಗಳನ್ನು ಶಾಂತಿಯುತ ಮತ್ತು ರಚನಾತ್ಮಕವಾಗಿ ವ್ಯಕ್ತಪಡಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!