ಪುತ್ತೂರು: ದರ್ಭೆಯಲ್ಲಿ ಆ.21ರಂದು ನಡೆದ ಗಲಾಟೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವಂತಹ ಸಂದೇಶಗಳನ್ನು ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಿದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‘ದಿನೇಶ್ ಪಂಜಿಗ’ ಹೆಸರಿನ ವಾಟ್ಸ್‌ಆ್ಯಪ್ ಖಾತೆಯಿಂದ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ಸಂದೇಶವನ್ನು ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅ.ಕ್ರ.100/2026ರಂತೆ ಬಿಎನ್‌ಎಸ್‌ನ ಕಲಂ 353(2), 57, 189ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಇದೇ ರೀತಿ ‘Sanjeeva Matandoor’ ಹೆಸರಿನ ಫೇಸ್‌ಬುಕ್ ಖಾತೆಯಿಂದಲೂ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕರಲ್ಲಿ ಭಯ ಉಂಟುಮಾಡುವ ಸಂದೇಶ ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅ.ಕ್ರ.102/2026ರಂತೆ ಪ್ರಕರಣ ದಾಖಲಿಸಲಾಗಿದೆ. ಎರಡೂ ಪ್ರಕರಣಗಳ ತನಿಖೆ ನಡೆಯುತ್ತಿದೆ.ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಪೊಲೀಸ್ ಇಲಾಖೆಯಿಂದ ನಿಯಮಾನುಸಾರ ಅನುಮತಿ ನೀಡಲಾಗುತ್ತದೆ. ಆದರೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಪ್ರತಿಭಟನೆಯ ದಿನಾಂಕ ಅಥವಾ ಸಮಯ ನಿಗದಿಪಡಿಸಿರುವುದು ಕಂಡುಬಂದರೆ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.











