ಬೆಳ್ತಂಗಡಿ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಟಾಟಾ ಸುಮೊ ವಾಹನದಿಂದ ಡಿಕ್ಕಿ ಹೊಡೆದು ಕೊಲ್ಲಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಬೆಳ್ತಂಗಡಿ ಕಲ್ಮಂಜ ನಿವಾಸಿ ಬಾಲಕೃಷ್ಣ (43) ನೀಡಿದ ದೂರಿನಂತೆ, ಧರ್ಮಸ್ಥಳ ನಿವಾಸಿ ಶರತ್ (33) ಕೆಲವು ತಿಂಗಳುಗಳ ಹಿಂದೆ ಬಾಲಕೃಷ್ಣ ಅವರನ್ನು ವಾಹನದಿಂದ ಡಿಕ್ಕಿ ಹೊಡೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಜು.30ರಂದು ಸಂಜೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಶರತ್ ಟಾಟಾ ಸುಮೊ (KA-05-AD-6341) ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಧರ್ಮಸ್ಥಳ ಗ್ರಾಮದ ಕುರುಮಾನಿ ಕ್ರಾಸ್ ಬಳಿ ಬಾಲಕೃಷ್ಣ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.ಡಿಕ್ಕಿಯ ಪರಿಣಾಮ ಬಾಲಕೃಷ್ಣ ಗಾಯಗೊಂಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 52/2026, ಕಲಂ 109 ಬಿಎನ್‌ಎಸ್-2023ರಂತೆ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿತ ಶರತ್‌ನನ್ನು ಆ.22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.











