ಬೆಳ್ತಂಗಡಿ, ಅ.4: ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗವಾಗಿದ್ದು, ಶ್ರದ್ಧೆ ಮತ್ತು ಭಕ್ತಿಯಿಂದ ಭಜನೆ ಮಾಡುವುದರಿಂದ ಭಗವಂತನ ಸಾಕ್ಷಾತ್ಕಾರದ ಜತೆಗೆ ಉತ್ತಮ ಸಂಸ್ಕಾರವೂ ಮೂಡುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ನಡೆದ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಭಗವಂತನ ಸಾಕ್ಷಾತ್ಕಾರಕ್ಕೆ ಹಲವು ಮಾರ್ಗಗಳಿದ್ದರೂ ರಾಗ, ತಾಳ ಮತ್ತು ಲಯಬದ್ಧವಾಗಿ ಶಿಸ್ತಿನಿಂದ ಭಜನೆ ಹಾಡುವುದರಿಂದ ಸುಲಭವಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದರು.ನಾಡಿನ ಅನೇಕ ಸಾಧು-ಸಂತರು ಹಾಗೂ ಮೀರಾಬಾಯಿಯಂತಹ ಭಕ್ತರು ತಮ್ಮನ್ನು ಭಗವಂತನಿಗೆ ಸಮರ್ಪಿಸಿಕೊಂಡು ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಇಸ್ಕಾನ್ ಸಂಸ್ಥೆಯೂ ವಿದೇಶಗಳಲ್ಲಿಯೂ ಭಜನೆಯ ಮೂಲಕ ಭಕ್ತಿಯ ಅರಿವು ಮತ್ತು ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.ಭಜನೆಯಿಂದ ನಮ್ಮಲ್ಲಿರುವ ಸಾತ್ವಿಕ ಶಕ್ತಿ ಜಾಗೃತಗೊಳ್ಳುತ್ತದೆ. ಇದರಿಂದ ನೈತಿಕತೆ ಬೆಳೆದು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಪ್ರಾರ್ಥನೆ, ಜಪ, ತಪ ಹಾಗೂ ಧ್ಯಾನದಿಂದ ಭಕ್ತರು ಮತ್ತು ಭಗವಂತನ ನಡುವೆ ಅವಿನಾಭಾವ ಸಂಬಂಧ ಬೆಳೆದುಬರುತ್ತದೆ ಎಂದರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹತ್ತು ಹಲವು ಜನಮಂಗಳ ಕಾರ್ಯಗಳನ್ನು ಕೈಗೊಂಡು ‘ರಾಜರ್ಷಿ’ಯಾಗಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಸಂತಸ ಹಾಗೂ ಅಭಿಮಾನದ ಸಂಗತಿ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಸನಾತನ ಸಂಸ್ಕೃತಿಯ ಪುನರುತ್ಥಾನ ಅಗತ್ಯಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕೆ ಕೃಷಿ ಸಂಸ್ಕೃತಿ ಹಾಗೂ ಋಷಿ ಸಂಸ್ಕೃತಿಯನ್ನು ಮರೆಯಬಾರದು. ಭಜನೆಯಿಂದ ನಾಲಗೆ ಪವಿತ್ರವಾಗುವುದರ ಜತೆಗೆ ಸಾರ್ಥಕ ಬದುಕಿಗೆ ಸ್ಫೂರ್ತಿ ದೊರೆಯುತ್ತದೆ ಎಂದರು.ಭಾವಪೂರ್ಣವಾಗಿ ಭಜನೆ ಮಾಡುವುದರಿಂದ ಜೀವನಮಟ್ಟ ಸುಧಾರಿಸುವುದರೊಂದಿಗೆ ನೈತಿಕ ಹಾಗೂ ಧಾರ್ಮಿಕ ಮೌಲ್ಯಗಳು ಉನ್ನತಿಗೇರುತ್ತವೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಅವರು ತಿಳಿಸಿದರು.‘ಕಮ್ಮಟದ ಅನುಭವವನ್ನು ಸಮಾಜಕ್ಕೆ ಹಂಚಿಕೊಳ್ಳಿ’ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಿಬಿರಾರ್ಥಿಗಳು ಕಮ್ಮಟದಲ್ಲಿ ಪಡೆದ ಅನುಭವ ಮತ್ತು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ತಮ್ಮ ತಮ್ಮ ಊರುಗಳಲ್ಲಿ ನಾಯಕರಾಗಿ, ಪ್ರಗತಿಯ ರೂವಾರಿಗಳಾಗಬೇಕು ಎಂದು ಸಲಹೆ ನೀಡಿದರು.ನಿತ್ಯವೂ ರಾಗ, ತಾಳ ಮತ್ತು ಲಯಬದ್ಧವಾಗಿ ಭಜನೆ ಮಾಡುವ ಮೂಲಕ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಹೇಳಿದರು. ಕಮ್ಮಟದಲ್ಲಿ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ಹಿರಿಯ ವಿದ್ವಾಂಸರನ್ನು ಹೆಗ್ಗಡೆಯವರು ಅಭಿನಂದಿಸಿದರು.212 ಶಿಬಿರಾರ್ಥಿಗಳಿಂದ ತರಬೇತಿಒಂದು ವಾರ ನಡೆದ ಭಜನಾ ಕಮ್ಮಟದಲ್ಲಿ 107 ಪುರುಷರು ಹಾಗೂ 105 ಮಹಿಳೆಯರು ಸೇರಿದಂತೆ ಒಟ್ಟು 212 ಶಿಬಿರಾರ್ಥಿಗಳು ಭಾಗವಹಿಸಿದ್ದರು ಎಂದು ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ನೀಡಿದರು.ಬ್ರಹ್ಮಾವರದ ತಿಮ್ಮಪ್ಪ ಕರ್ಕೇರ ಹಾಗೂ ಸುಳ್ಯದ ಶ್ರೀಲತಾ ಅವರು ಕಮ್ಮಟದ ಕುರಿತು ತಮ್ಮ ಅಭಿಪ್ರಾಯ ಮತ್ತು ಅನಿಸಿಕೆ ಹಂಚಿಕೊಂಡರು. ಶಿಬಿರಾರ್ಥಿಗಳಿಂದ ಸಾಮೂಹಿಕ ನೃತ್ಯ ಭಜನೆ ಹಾಗೂ ಕುಣಿತ ಭಜನೆ ನಡೆಯಿತು.ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ರತ್ನವರ್ಮ ಜೈನ್ ವಂದಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು..











