ಉಪ್ಪಿನಂಗಡಿ: ಹಿರೇಬಂಡಾಡಿಯ ಪೆರಾಬೆ ನಿವಾಸಿ ಮಾಧವ ಗೌಡ (44) ಎಂಬವರು ಅ.2ರಿಂದ ನಾಪತ್ತೆಯಾಗಿದ್ದು, ಅವರ ಬೈಕ್ ಹಾಗೂ ಮೊಬೈಲ್ ಉಪ್ಪಿನಂಗಡಿಯ ಕುಮಾರಧಾರ ಹಳೆ ಸೇತುವೆಯ ಮೇಲೆ ಪತ್ತೆಯಾಗಿವೆ.ಆತೂರಿನಲ್ಲಿ ಇತ್ತೀಚೆಗಷ್ಟೇ ಟಯರ್ ಪಂಕ್ಚರ್ ಅಂಗಡಿ ಆರಂಭಿಸಿದ್ದ ಮಾಧವ ಗೌಡ ಅವರು ಅ.2ರಂದು ಮನೆಯಿಂದ ಅಂಗಡಿಗೆ ತೆರಳುವುದಾಗಿ ಹೇಳಿ ತೆರಳಿದ್ದರು. ಆದರೆ ಬಳಿಕ ಮನೆಗೂ ವಾಪಸಾಗದೆ, ಅಂಗಡಿಗೂ ತೆರಳದೆ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಕುಮಾರಧಾರ ಹಳೆ ಸೇತುವೆಯ ಮೇಲೆ ಅವರ ಬೈಕ್ ಮತ್ತು ಮೊಬೈಲ್ ಪತ್ತೆಯಾಗಿವೆ.ಮಾಧವ ಗೌಡ ಅವರು ಕಳೆದ ಸುಮಾರು 14 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಸುಮಾರು ನಾಲ್ಕು ತಿಂಗಳ ಹಿಂದೆ ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಕುಡಿತದ ಚಟ ಬಿಡಲು ಚಿಕಿತ್ಸೆ ಪಡೆದಿದ್ದರು. ಇತ್ತೀಚಿನ ಮೂರು ದಿನಗಳಿಂದ ಮತ್ತೆ ಮದ್ಯಪಾನ ಆರಂಭಿಸಿದ್ದರು ಎನ್ನಲಾಗಿದೆ.ಈ ಕುರಿತು ಮನೆಯವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ನದಿಯಲ್ಲಿ ಶೋಧ: ನಾಪತ್ತೆಯಾಗಿರುವ ಮಾಧವ ಗೌಡ ಅವರ ಪತ್ತೆಗಾಗಿ ಉಪ್ಪಿನಂಗಡಿ ಹಳೆ ಸೇತುವೆ ಬಳಿಯ ಕುಮಾರಧಾರ ನದಿಯಲ್ಲಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.











