ಪುತ್ತೂರು: ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಕ್ಯಾಂಪಸ್ ನಿರ್ಮಿಸಿ ಗುಣಮಟ್ಟದ ಆರೋಗ್ಯ ಶಿಕ್ಷಣ ನೀಡುತ್ತಿರುವ ಪ್ರಗತಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಸಮಾಜದ ಆಸ್ತಿಯಾಗಿ ಬೆಳೆದು ಬರಬೇಕು ಎಂದು ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಯು.ಟಿ. ಯು.ಟಿ.ಇಫ್ತಿಕಾರ್ ಅಲಿ ಹೇಳಿದರು.
ಪುತ್ತೂರಿನ ಕೊಟೇಚಾ ಸಭಾಂಗಣದಲ್ಲಿ ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್, ಪ್ರಗತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಪ್ರಗತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಫನ್ ಫೆಸ್ಟ್–2026’ ವಾರ್ಷಿಕ ಕಲೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಆರೋಗ್ಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಜವಾಬ್ದಾರಿ ಮಹತ್ವದ್ದಾಗಿದೆ.
ವೃತ್ತಿಜೀವನದಲ್ಲಿ ಶಿಸ್ತು ಅತ್ಯಗತ್ಯ. ಎಲ್ಲೆಡೆ ಗೌರವಯುತವಾಗಿ ನಡೆದುಕೊಳ್ಳುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಉತ್ತಮ ಕೆಲಸ ಮಾಡಿದಾಗ ಸಮಾಜವೇ ಗುರುತಿಸುತ್ತದೆ. ಪುತ್ತೂರು ಮಾತ್ರವಲ್ಲದೆ ಸುತ್ತಮುತ್ತಲಿನ ಜನರಿಗೂ ಈ ಸಂಸ್ಥೆ ಉಪಯುಕ್ತವಾಗಿದ್ದು, ಸಂಸ್ಥೆಯ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವುದಾಗಿ ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಎಂ. ದತ್ತಾತ್ರೇಯ ರಾವ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಇಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಣವು ಶಿಕ್ಷೆಯಾಗದೆ ಬದುಕಿನ ಬೆಳವಣಿಗೆಗೆ ಪೂರಕವಾಗಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.
ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಡಾ. ಸುಧಾ ಎಸ್. ರಾವ್ ಮಾತನಾಡಿ, ಸಂಸ್ಥೆಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೇವರ ಕೃಪೆ, ಕಠಿಣ ಪರಿಶ್ರಮ ಹಾಗೂ ಸಮರ್ಪಣೆಯಿಂದ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ. ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದರು.ಟ್ರಸ್ಟ್ ಅಧ್ಯಕ್ಷ ಡಾ. ಯು. ಶ್ರೀಪತಿ ರಾವ್ ಮಾತನಾಡಿ, ಜನರ ಅಗತ್ಯಗಳನ್ನು ಮನಗಂಡು ಉತ್ತಮ ಉದ್ದೇಶದಿಂದ ಸಂಸ್ಥೆ ಆರಂಭಿಸಲಾಗಿದೆ. ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಶಿಕ್ಷಣ ತಲುಪಿಸುವ ಗುರಿ ಹೊಂದಲಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಕ್ವಾಲಿಫೈಡ್ ವಿದ್ಯಾರ್ಥಿಗಳು ದೊಡ್ಡ ಆಸ್ತಿ. ಪಠ್ಯ ಕಲಿಕೆಗಿಂತ ಅನುಭವವೂ ಅಷ್ಟೇ ಮುಖ್ಯ. ಪುತ್ತೂರಿನ ಜನತೆಗೆ ಸಂಸ್ಥೆಯ ಧ್ಯೇಯ ತಲುಪಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಯು.ಟಿ. ಇಫಿಕಾರ್ ಅಲಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ಸಾಧನೆ ಮಾಡಿದ ಎ.ಆರ್. ತೃಪ್ತಿ ಹಾಗೂ ಅಜಿತಾ ವಿ. ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪ್ರಗತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಉಪಪ್ರಾಂಶುಪಾಲೆ ಚೈತ್ರ ಕೆ., ಪ್ರಗತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲೆ ಮಾನಸ ಹಾಗೂ ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಪ್ರಾಂಶುಪಾಲೆ ಹೇಮಲತಾ ವಾರ್ಷಿಕ ವರದಿ ಮಂಡಿಸಿದರು.ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ್ ಕುಮಾರ್, ವಿದ್ಯಾರ್ಥಿ ನಾಯಕ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ ಸ್ವಾಗತಿಸಿದರು. ಅನಿತಾ ವಂದಿಸಿದರು. ರೇಷ್ಠಾ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.











