ಪುತ್ತೂರು: ಅಕ್ರಮವಾಗಿ ಜಾನುವಾರುಗಳನ್ನು ಕೇರಳದ ಕಡೆಗೆ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ಬಂಧಿಸಿದ್ದಾರೆ.ಅ.5ರಂದು ಬೆಳಗಿನ ಜಾವ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕೇರಳದ ಕಡೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರು ಸಿಬ್ಬಂದಿಗಳೊಂದಿಗೆ ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಬಳಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ KA-19-AF-8558 ಸಂಖ್ಯೆಯ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿ ಸಾಗಿಸುತ್ತಿರುವುದು ಪತ್ತೆಯಾಗಿತ್ತು.ಪೊಲೀಸರನ್ನು ಕಂಡ ತಕ್ಷಣ ವಾಹನದ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದರು.
ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಮಾಂಸಕ್ಕಾಗಿ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 125/2026ರಡಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4, 6, 7, 12 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಕಲಂ 11(ಡಿ) ಅಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಅಗತ್ಯ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪದ ಮೇರೆಗೆ ಆರ್ಯಾಪು ನಿವಾಸಿ ಶಿವಪ್ರಸಾದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪರಾರಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.











