ಮಂಡ್ಯ, ಸೆಪ್ಟೆಂಬರ್ 19: ಜಿಲ್ಲೆಯ ನಾಗಮಂಗಲ ಗಲಭೆ ಕೇಸ್ (Nagamangala Violence) ಸಂಬಂಧ ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ. ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ನಾಗಮಂಗಲ ಡಿವೈಎಸ್‌ಪಿ ಡಾ.ಸುಮೀತ್ ಅಮಾನತುಗೊಳಿಸಿ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ. ಡಾ.ಸುಮೀತ್ ಜಾಗಕ್ಕೆ ಪ್ರಭಾರ ಡಿವೈಎಸ್‌ಪಿ ಆಗಿ ಶಿವಮೂರ್ತಿ ಎಂಬುವವರನ್ನು ನೇಮಕ ಮಾಡಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾಗಮಂಗಲ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು. ಗಲಭೆಗೆ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಜಿಪುಣತನವೇ ಕಾರಣ ಎಂಬ ಅನುಮಾನ ಮೂಡಿತ್ತು. ರಿಜರ್ವ್ ಸಿಬ್ಬಂದಿಗೆ ಊಟ ಕೊಡಿಸಲು ಹಿಂದೇಟು ಹಾಕಿದ ಇನ್ಸ್‌ಪೆಕ್ಟರ್, ಭದ್ರತೆಗೆ ಬಂದಿದ್ದ ಡಿಎಆರ್ ಸಿಬ್ಬಂದಿನ ಬೆಳ್ಳೂರಿಗೆ ಶಿಫ್ಟ್ ಮಾಡಿದ್ದರು.
ರಿಸರ್ವ್ ವಾಹನ ಹೊರಟ ಅರ್ಧ ಗಂಟೆಗೆ ಗಲಭೆ ನಡೆದಿತ್ತು. ಈ ವೇಳೆ ನಿರ್ಲಕ್ಷ್ಯ ತೋರಿದ ಅಶೋಕ್ ಕುಮಾರ್ನ ಸಸ್ಪೆಂಡ್ ಮಾಡಲಾಗಿತ್ತು.
ನಾಗಮಂಗಲ ಗಲಭೆಯ ಕೇಂದ್ರ ಬಿಂದು ಬದ್ರಿಕೊಪ್ಪಲು ಗ್ರಾಮ. ವಾರದ ಹಿಂದೆ ಗ್ರಾಮಕ್ಕೆ ಗ್ರಾಮವೇ ಗಣೇಶ ಹಬ್ಬ ಖುಷಿಯಲ್ಲಿ ತೇಲಾಡಿತ್ತು. ಆದರೆ ಇದೀಗ ಇದೇ ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಬಂಧನದ ಭೀತಿಯಿಂದ ಯುವಕರು ಊರು ತೊರೆದಿದ್ದು, ಮನೆ ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಬದ್ರಿಕೊಪ್ಪಲು ಗ್ರಾಮದ 13 ಮಂದಿ ಅರೆಸ್ಟ್ ಆಗಿದ್ದು, ಇವತ್ತು ಗ್ರಾಮಸ್ಥರು ಒಟ್ಟಾಗಿ ಕಾರಾಗೃಹದಲ್ಲಿ ತಮ್ಮವರನ್ನ ಭೇಟಿ ಮಾಡಿದ್ದಾರೆ.