ಪುತ್ತೂರು: ಶ್ರೀ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ಪ್ರತಿವರ್ಷ ನಡೆಯುವ ನವರಾತ್ರಿ ಉತ್ಸವ, ಶ್ರೀ ಶಾರದೋತ್ಸವ, ಚಂಡಿಕಾಹೋಮ ಹಾಗೂ ಭವ್ಯ ಶೋಭಾಯಾತ್ರೆ ಈ ಬಾರಿ ಅ.11ರಿಂದ 21ರವರೆಗೆ ನಡೆಯಲಿದೆ. ಈ ಬಾರಿ ‘ಪುತ್ತೂರು ಶಾರದೋತ್ಸವ’ ಎಂಬ ಹೆಸರಿನ ಬದಲಾಗಿ ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಉತ್ಸವವನ್ನು ಆಚರಿಸಲಾಗುವುದು ಎಂದು ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದರು.ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭಾಯಾತ್ರೆಯು ಪ್ರಮುಖ ಆಕರ್ಷಣೆಯಾಗಿದ್ದು, ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಕರ್ನಾಟಕ ಹಾಗೂ ಕೇರಳದ ವಿವಿಧ ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿವೆ. ಸುಮಾರು 500ರಿಂದ 600 ಕುಣಿತ ಭಜನಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸನಾತನ ಸಂಸ್ಕೃತಿಯ ಮಹತ್ವವನ್ನು ಸಾರುವ ರೀತಿಯಲ್ಲಿ ಶೋಭಾಯಾತ್ರೆ ನಡೆಯಲಿದೆ ಎಂದರು.ಈ ಬಾರಿ ಉತ್ಸವದಲ್ಲಿ ಸಮಯಪಾಲನೆ ಹಾಗೂ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಲ್ಲ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿವೆ. ವಿಶೇಷವಾಗಿ ಈ ಬಾರಿ ಡಿ.ಜೆ. ಹಾಗೂ ಸಿಡಿಮದ್ದು ಪ್ರದರ್ಶನ ಇರುವುದಿಲ್ಲ. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಒತ್ತು ನೀಡಿ ಪುತ್ತೂರು ದಸರಾ ಆಚರಿಸಲಾಗುವುದು ಎಂದು ಅವರು ಹೇಳಿದರು.ಪುತ್ತೂರಿನ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವಕ್ಕೆ ಸಹಕರಿಸುವಂತೆ ಸೀತಾರಾಮ ರೈ ಕೆದಂಬಾಡಿಗುತ್ತು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಶಾರದೋತ್ಸವದ ಗೌರವ ಮಾರ್ಗದರ್ಶಕ ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ದಯಾನಂದ, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಹಾಗೂ ನವೀನ್ ಕುಲಾಲ್ ಮತ್ತು ಕೋಶಾಧಿಕಾರಿ ವಸಂತ್ ಕುಮಾರ್ ಉಪಸ್ಥಿತರಿದ್ದರು.











