ಪುತ್ತೂರು: ಮುಂಬೈ ಪೊಲೀಸ್ ಹಾಗೂ ಎಟಿಎಸ್ (ATS) ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು, ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಬಂಧನದ ಭೀತಿ ಹುಟ್ಟಿಸುವ ಮೂಲಕ ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬರೋಬ್ಬರಿ ₹1.31 ಕೋಟಿ ವಂಚಿಸಿರುವ ಘಟನೆ ನಡೆದಿದೆ.ಆರೋಪಿಗಳು ವಾಟ್ಸ್‌ಆ್ಯಪ್ ವಿಡಿಯೋ ಕರೆಗಳ ಮೂಲಕ ನಿರಂತರವಾಗಿ ಬೆದರಿಕೆ ಹಾಕಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ (RTGS) ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ.ಆರೋಪಿಗಳ ಮಾತನ್ನು ನಂಬಿದ ದೂರುದಾರರು, 2026ರ ಸೆಪ್ಟೆಂಬರ್ 2ರಿಂದ ಅಕ್ಟೋಬರ್ 6ರವರೆಗೆ ಹಂತ ಹಂತವಾಗಿ ಒಟ್ಟು ₹1,31,50,000 ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ.ನಂತರ ತಾನು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತ ದೂರುದಾರರು, ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.ಈ ಕುರಿತು ದಕ್ಷಿಣ ಕನ್ನಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (CCPS DK) ಅ.ಕ್ರ. 42/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಸಾರ್ವಜನಿಕರಿಗೆ ಎಚ್ಚರಿಕೆ: ಪೊಲೀಸ್ ಅಥವಾ ಇತರ ತನಿಖಾ ಸಂಸ್ಥೆಗಳ ಅಧಿಕಾರಿಗಳೆಂದು ಕರೆ ಮಾಡಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸುವವರನ್ನು ನಂಬಬೇಡಿ. ಬ್ಯಾಂಕ್ ಖಾತೆ ಪರಿಶೀಲನೆಯ ನೆಪದಲ್ಲಿ ಯಾರಿಗೂ ಹಣ ವರ್ಗಾಯಿಸಬೇಡಿ. ಸೈಬರ್ ವಂಚನೆಗೊಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ ದೂರು ನೀಡಿ.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!