ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಐತಿಹಾಸಿಕ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 92ನೇ ವರ್ಷದ ನವರಾತ್ರಿ ಉತ್ಸವ ಹಾಗೂ ಪುತ್ತೂರು ದಸರಾ ಕಾರ್ಯಕ್ರಮಗಳಿಗೆ ಅ.11ರಂದು ಚಾಲನೆ ನೀಡಲಾಯಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಶಾರದಾ ಭಜನಾ ಮಂದಿರದಲ್ಲಿ ಶಾರದೋತ್ಸವ ನಡೆಯುವ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ದೇವರಿಗೆ ಪೂಜೆ ನಡೆಯುತ್ತದೆ. ಶಾರದೋತ್ಸವದ ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಉದ್ಘಾಟಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಕೆದಂಬಾಡಿಗುತ್ತು ಸೀತಾರಾಮ ರೈ ಅವರ ಅಧ್ಯಕ್ಷತೆಯಲ್ಲಿ ಶಾರದೋತ್ಸವದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದೇನೆ. ಇದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿಯೂ ಇಲ್ಲಿ ಹಲವು ಉತ್ತಮ ಕಾರ್ಯಗಳು ನಡೆಯಲಿ. ಭಜನಾ ಮಂದಿರ ಹೊಸತನದೊಂದಿಗೆ ಅಭಿವೃದ್ಧಿ ಹೊಂದಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಬೆಂಬಲವಿದೆ. ಎಲ್ಲ ಸಂಘಟನೆಗಳ ಉದ್ದೇಶವೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಶಾರದಾ ಭಜನಾ ಮಂದಿರದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಯಾಗಿರಬೇಕು ಎಂದು ಶುಭ ಹಾರೈಸಿದರು.ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನದ ಮಾಜಿ ಆಡಳಿತ ಮುಕ್ತೇಸರ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಮೈಸೂರು ದಸರಾ, ಮಡಿಕೇರಿ ದಸರಾ ಹಾಗೂ ಮಂಗಳೂರು ದಸರಾ ಸೇರಿದಂತೆ ವಿವಿಧೆಡೆ ದಸರಾ ಉತ್ಸವಗಳು ನಡೆಯುತ್ತಿವೆ. ಪುತ್ತೂರಿನಲ್ಲಿಯೂ ಶಾರದಾ ಭಜನಾ ಮಂದಿರದಲ್ಲಿ ಕಳೆದ 92 ವರ್ಷಗಳಿಂದ ಉತ್ಸವ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಇದೀಗ ಪುತ್ತೂರು ದಸರಾಕ್ಕೆ ಚಾಲನೆ ದೊರೆತಿದೆ. ಪುತ್ತೂರು ತಾಲೂಕಿನ ಜನತೆಗೆ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುವ ಮೂಲಕ ಕೆದಂಬಾಡಿಗುತ್ತು ಸೀತಾರಾಮ ರೈ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಉತ್ಸವ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯೆ ವೀಣಾ ಹಾಗೂ ಬೊಳುವಾರು ಓಂ ಶಕ್ತಿ ಆಂಜನೇಯ ಮಂತ್ರಾಲಯದ ನೀಲಂತ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು.ಪುತ್ತೂರು ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಮಂದಿರದ ಹಿರಿಯ ಸದಸ್ಯ ಕಿಟ್ಟಣ್ಣ ಗೌಡ, ಟಿ.ಎ.ಪಿ.ಸಿ.ಎಂ.ಎಸ್. ಸದಸ್ಯ ಜಯರಾಮ ರೈ ಬಾಲಯ, ಶ್ರೀ ಮಹಾಲಿಂಗೇಶ್ವರ ಭಜನಾ ತಂಡದ ಪ್ರಭಾವತಿ ಹಾಗೂ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಜನಾ ಮಂದಿರದ ಅಧ್ಯಕ್ಷ ಹಾಗೂ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಕಾರ್ಯಕ್ರಮದ ನಾಯಕತ್ವವನ್ನು ತಾವು ವಹಿಸಿಕೊಂಡಿದ್ದರೂ ಇದರ ಯಶಸ್ಸಿನ ಹಿಂದೆ ಎಲ್ಲರ ಸಹಕಾರವಿದೆ. ಪದಾಧಿಕಾರಿಗಳು ಹಾಗೂ ನಿತ್ಯ ಕರಸೇವಕರ ತಂಡದ ಸಹಕಾರದಿಂದ ಕಳೆದ ಮೂರು ವರ್ಷಗಳಿಂದ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗಣ್ಯರು ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ಸಂತೋಷದ ವಿಚಾರ. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಪುತ್ತೂರಿನ ಜನತೆಯ ಸಹಕಾರ ಅಗತ್ಯ ಎಂದರು.ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು, ಮೈಸೂರು ಮತ್ತು ಮಡಿಕೇರಿ ದಸರಾಗಳ ಮಾದರಿಯಲ್ಲಿ ಇದನ್ನೂ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ನಮ್ಮ ಸಂಕಲ್ಪವಾಗಿದೆ. ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಶಾರದಾ ಮಾತೆಯ ಭವ್ಯ ಭಜನಾ ಮಂದಿರದಲ್ಲಿ ನಡೆಯುವ ಈ ದಸರಾ ಮಹೋತ್ಸವ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆಯಬೇಕು. ಜಗನ್ಮಾತೆ ನಮ್ಮ ಸಂಕಲ್ಪವನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ ಎಂದು ಹೇಳಿದರು.ಪುತ್ತೂರು ಜಾತ್ರೆಯ ಅವಭೃತ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಜಗನ್ಮಾತೆಯ ಪುತ್ತೂರು ದಸರಾ ಸಂದರ್ಭದಲ್ಲಿಯೂ ದೀಪಾಲಂಕಾರ ಮಾಡಲಾಗುತ್ತಿದ್ದು, ಇದು ಉತ್ಸವದ ವಿಶೇಷತೆಯಾಗಿದೆ ಎಂದು ತಿಳಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.ಶೋಭಾಯಾತ್ರೆಯ ಸಂಚಾಲಕ ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಶುಭಾ ರೈ ಸಹಕರಿಸಿದರು.










