ಭಾಸ್ಕರ್ ರಾವ್ ವಿರುದ್ಧ ತನಿಖೆಗೆ ಆಗ್ರಹ: ಗೃಹ ಸಚಿವರಿಗೆ ದೂರುಬೆಂಗಳೂರು: ಸುಳ್ಳು ಸುದ್ದಿ ಹರಡಿದ ಆರೋಪದಡಿ ಬಿಜೆಪಿ ನಾಯಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ವಿರುದ್ಧ ಪ್ರಕರಣ ದಾಖಲಿಸಿ, ಅವರ ಸೇವಾವಧಿಯಲ್ಲಿನ ಕಾರ್ಯವೈಖರಿ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ಸಲ್ಲಿಸಲಾಗಿದೆ.ಕೆಪಿಸಿಸಿಯ ಸೇವಾದಳ ಯಂಗ್ ಬ್ರಿಗೇಡ್ ರಾಜ್ಯ ಘಟಕದ ಅಧ್ಯಕ್ಷ ಜುನೈದ್ ಪಿ.ಕೆ. ಅವರು ಸೋಮವಾರ ದೂರು ಸಲ್ಲಿಸಿದ್ದು, ಭಾಸ್ಕರ್ ರಾವ್ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿನ ಲೋಪಗಳು ಸೇರಿದಂತೆ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಹಾಗೂ ನಾಗರಿಕರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅ. 8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನಾದೇಶ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಯೂಟ್ಯೂಬರ್ ಹಾಗೂ ರಾಜಕೀಯ ವಿಶ್ಲೇಷಕ ಧ್ರುವ್ ರಾಠಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಈ ನಡುವೆ, ಧ್ರುವ್ ರಾಠಿ ವಿದೇಶಿ ಪ್ರಜೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿ, ಅವರ ಪ್ರವೇಶ ಮತ್ತು ನಿರ್ಗಮನ ದಾಖಲೆಗಳನ್ನು ಪರಿಶೀಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಭಾಸ್ಕರ್ ರಾವ್ ಮನವಿ ಮಾಡಿದ್ದರು ಎನ್ನಲಾಗಿದೆ.ಆದರೆ, ಧ್ರುವ್ ರಾಠಿ ಭಾರತೀಯ ಪ್ರಜೆಯಾಗಿದ್ದು, ಅವರಿಗೆ ವಿದೇಶಿಗರ ಕಾಯಿದೆ ಅನ್ವಯಿಸುವುದಿಲ್ಲ ಎಂದು ಜುನೈದ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರಚಾರಕ್ಕಾಗಿ ಗೊಂದಲ ಸೃಷ್ಟಿಸಿ ಸುಳ್ಳು ಸುದ್ದಿ ಹರಡುವ ಮೂಲಕ ಹೋರಾಟಗಾರರ ಮೇಲಿನ ಜನರ ವಿಶ್ವಾಸ ಕುಗ್ಗಿಸಲು ಭಾಸ್ಕರ್ ರಾವ್ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ವಿರುದ್ಧ ಪ್ರಕರಣ ದಾಖಲಿಸಿ, ಅವರ ಹೇಳಿಕೆಗಳ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜುನೈದ್ ಪಿ.ಕೆ. ಆಗ್ರಹಿಸಿದ್ದಾರೆ.










