ಪುತ್ತೂರು, ಅ.13: ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿ ತಾಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ಅ.12ರಂದು ರಾತ್ರಿ ನಡೆದಿದೆ. ಘಟನೆಯಲ್ಲಿ ಜೊತೆಗಿದ್ದ ಅಪ್ರಾಪ್ತ ಬಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಕಲ್ಮಡ್ಕ ಗ್ರಾಮದ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ರಮೇಶ್ ಅಲಿಯಾಸ್ ಗಣೇಶ್ (36) ಮೃತಪಟ್ಟವರು. ಭರತ್ ಅವರ ಅಕ್ಕನ ಮಗನಾದ ಬಾಲಕ ಸಿಂಚನ್ ಗಾಯಗೊಂಡಿದ್ದಾನೆ.ಸೋಮವಾರ ರಾತ್ರಿ ಭರತ್, ರಮೇಶ್ ಹಾಗೂ ಬಾಲಕ ಮನೆ ಸಮೀಪದ ಹೊಳೆಕೆರೆಯ ತೋಡಿನಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ತೋಡಿನ ಪಕ್ಕದಲ್ಲಿರುವ ಮಧುಸೂದನ ಭಟ್ ಎಂಬವರ ತೋಟದಲ್ಲಿ ಹಂದಿ ಹಿಡಿಯಲು ಅಳವಡಿಸಿದ್ದ ವಿದ್ಯುತ್ ತಂತಿ ತಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬಾಲಕನಿಗೂ ವಿದ್ಯುತ್ ತಾಗಿ ಕೈ, ಕಾಲು ಹಾಗೂ ಎದೆಯ ಭಾಗಕ್ಕೆ ಗಾಯಗಳಾಗಿವೆ.ಘಟನೆಯ ಬಳಿಕ ಬಾಲಕ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಗಾಯಾಳುವನ್ನು ಹಾಗೂ ಮೃತಪಟ್ಟ ಇಬ್ಬರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಪರೀಕ್ಷಿಸಿ ಇಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ತೋಟಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಆರೋಪದ ಮೇಲೆ ತೋಟದ ಮಾಲೀಕ ಮಧುಸೂದನ ಭಟ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಕಲಂ 105 ಹಾಗೂ ವಿದ್ಯುತ್ ಕಾಯ್ದೆಯ ಕಲಂ 135(1)(E) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










