ವಿಟ್ಲ: ಕೊಲ್ನಾಡು ಗ್ರಾಮದ ಕುಳಾಲು ಬೊಲ್ಪಾದೆ ಎಂಬಲ್ಲಿನ ಅಪಾಯಕಾರಿ ರಸ್ತೆ ತಿರುವಿನಲ್ಲಿ ಮಂಗಳವಾರ ಕಾರು ಮತ್ತು ಆಕ್ಟಿವಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.ವಿಟ್ಲ ಪಡೂರು ಗ್ರಾಮದ ಕಡಂಬು ನಿವಾಸಿ, ಮೇಸ್ತ್ರಿ ವೃತ್ತಿಯ ರಾಮಣ್ಣ ಮೂಲ್ಯ (45) ಗಾಯಗೊಂಡವರು. ಅಪಘಾತದಲ್ಲಿ ಅವರ ಬಲಗೈ ಮೂಳೆ ಮುರಿದಿದೆ.ರಾಮಣ್ಣ ಮೂಲ್ಯ ಅವರು KA 19 EK 6218 ಸಂಖ್ಯೆಯ ಆಕ್ಟಿವಾದಲ್ಲಿ ಕುಡ್ತಮುಗೇರು ಕಡೆಯಿಂದ ಕುಳಾಲು ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೊಲ್ಪಾದೆಯ ಅಪಾಯಕಾರಿ ತಿರುವಿನ ಏರು ರಸ್ತೆಯಲ್ಲಿ ಎದುರಿನಿಂದ ಬಂದ KA 19 MJ 7242 ಸಂಖ್ಯೆಯ ಮಾರುತಿ ಕಾರು ಆಕ್ಟಿವಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸಂಪೂರ್ಣ ಜಖಂಗೊಂಡಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ.ಘಟನೆಯ ಬಳಿಕ ಸ್ಥಳೀಯರು ಗಾಯಾಳು ರಾಮಣ್ಣ ಮೂಲ್ಯ ಅವರನ್ನು ವಿಟ್ಲದ ಬೆನಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ.










