ವಿಟ್ಲ: ಕ್ರಿಕೆಟ್ ಪಂದ್ಯಾಟದಲ್ಲಿ ಸ್ಕೋರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು, ಮೂವರು ಯುವಕರು ಸೇರಿಕೊಂಡು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಹಳೀರ ನಿವಾಸಿ ಶೌಕತ್ ಅಲಿ ಅವರ ಪುತ್ರ ರಿಜ್ವಾನ್ (22) ದೂರು ನೀಡಿದವರು. ಸಮ್ಮಾಸ್ ಸೇರಿದಂತೆ ಮೂವರು ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.ರಿಜ್ವಾನ್ ಅವರು ಮಾಣಿಯ KARS ಆಂಬುಲೆನ್ಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕ್ರಿಕೆಟ್ ಪಂದ್ಯಾಟಗಳಲ್ಲಿ ಅಂಪೈರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅ. 11ರಂದು ಸ್ನೇಹಿತರಾದ ಶರೀಫ್ ಮತ್ತು ನಶಾತ್ ಅವರೊಂದಿಗೆ ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ ಆಯೋಜಿಸಲಾಗಿದ್ದ 18 ವರ್ಷದೊಳಗಿನವರ ಎಂಟು ತಂಡಗಳ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ತೆರಳಿದ್ದರು.ಮಧ್ಯಾಹ್ನ ಸುಮಾರು 3.30ರ ವೇಳೆಗೆ ಕ್ವಾಲಿಟಿ ಮಾಣಿ ಮತ್ತು GFC ಗಡಿಯಾರ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಸ್ಕೋರ್ ವಿಚಾರವಾಗಿ ಎರಡೂ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಗಡಿಯಾರ ತಂಡದ ಸಮ್ಮಾಸ್ ಎಂಬಾತ ನಶಾತ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದನ್ನು ಪ್ರಶ್ನಿಸಿದಾಗ ಸಮ್ಮಾಸ್ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ತನ್ನ ತಲೆ ಹಾಗೂ ಮುಖದ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ರಿಜ್ವಾನ್ ದೂರಿನಲ್ಲಿ ಆರೋಪಿಸಿದ್ದಾರೆ.ಸ್ಥಳದಲ್ಲಿದ್ದವರು ಹಲ್ಲೆಯನ್ನು ತಡೆದಿದ್ದು, ಬಳಿಕ ಆರೋಪಿಗಳು ಅಲ್ಲಿಂದ ತೆರಳುವಾಗ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ರಿಜ್ವಾನ್ ಅವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!