ಪುತ್ತೂರು: ಕೇರಳ ರಾಜ್ಯದ ಆನ್ಲೈನ್ ಲಾಟರಿಯಲ್ಲಿ ₹8 ಲಕ್ಷ ಬಹುಮಾನ ಗೆದ್ದಿರುವುದಾಗಿ ನಂಬಿಸಿ, ತೆರಿಗೆ ಹಾಗೂ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದು ಪುತ್ತೂರಿನ ಹಿರಿಯ ನಾಗರಿಕರೊಬ್ಬರಿಗೆ ₹2,34,272.99 ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕಡೇಶ್ವಾಲ್ಯದ ಸೀತಾರಾಮ ಭಟ್ (65) ಅವರು ದೂರು ನೀಡಿದ್ದು, ಡಿಕೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಫೇಸ್ಬುಕ್ ರೀಲ್ಸ್ ಮೂಲಕ ಲಾಟರಿ ಆಮಿಷಸೀತಾರಾಮ ಭಟ್ ಅವರು ಸೆ.21ರಂದು ಮೊಬೈಲ್ನಲ್ಲಿ ಫೇಸ್ಬುಕ್ ರೀಲ್ಸ್ ವೀಕ್ಷಿಸುತ್ತಿದ್ದಾಗ ‘Kerala Mega Jackpot Tickets’ ಎಂಬ ಆನ್ಲೈನ್ ಲಾಟರಿ ಜಾಹೀರಾತು ಕಂಡುಬಂದಿತ್ತು. ಅದರಲ್ಲಿದ್ದ ಲಿಂಕ್ ಮೂಲಕ ವೆಬ್ಸೈಟ್ ತೆರೆದು ಮೂರು ಲಾಟರಿ ಟಿಕೆಟ್ಗಳನ್ನು ಆಯ್ಕೆ ಮಾಡಿದ್ದರು. ಬಳಿಕ ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯೊಬ್ಬರು ಮೂರು ಟಿಕೆಟ್ಗಳಿಗೆ ₹120 ಪಾವತಿಸುವಂತೆ ತಿಳಿಸಿದ್ದರು. ಅದರಂತೆ ಅವರು ಹಣ ಪಾವತಿಸಿದ್ದರು.ಟಿಕೆಟ್ ಬುಕ್ ಆಗಿರುವುದಾಗಿ ಸಂದೇಶ ಬಂದಿದ್ದು, ಅದೇ ದಿನ ಲಾಟರಿ ಡ್ರಾ ನಡೆಯಲಿದೆ ಎಂದು ತಿಳಿಸಲಾಗಿತ್ತು. ಬಳಿಕ ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿದ ವ್ಯಕ್ತಿ, ಸೀತಾರಾಮ ಭಟ್ ಅವರಿಗೆ ಮೂರನೇ ಬಹುಮಾನವಾಗಿ ₹8 ಲಕ್ಷ ಬಂದಿದೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಅವರು ತಮ್ಮ ಬ್ಯಾಂಕ್ ಖಾತೆಯ ಪಾಸ್ಬುಕ್ ಫೋಟೋವನ್ನು ಕಳುಹಿಸಿದ್ದರು. ನಂತರ ಅವರ ಖಾತೆಗೆ ₹8 ಲಕ್ಷ ಜಮೆಯಾಗಿರುವಂತೆ ತೋರಿಸುವ ಸಂದೇಶವೊಂದನ್ನೂ ಕಳುಹಿಸಲಾಗಿತ್ತು.ತೆರಿಗೆ, ಜಿಎಸ್ಟಿ ಹೆಸರಿನಲ್ಲಿ ಹಣ ವಸೂಲಿಬಹುಮಾನದ ಹಣ ಪಡೆಯಲು ತೆರಿಗೆ ಪಾವತಿಸಬೇಕೆಂದು ತಿಳಿಸಿ ಮೊದಲು ₹4,999 ಪಡೆಯಲಾಗಿದೆ. ಬಳಿಕ ಬ್ಯಾಂಕ್ ಶುಲ್ಕ, ಜಿಎಸ್ಟಿ, ಆರ್ಬಿಐ ಪ್ರೊಸೆಸಿಂಗ್ ಶುಲ್ಕ ಹಾಗೂ ಟಿಡಿಎಸ್ ಪಾವತಿಯ ಹೆಸರಿನಲ್ಲಿ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಆರೋಪಿಗಳು ಕೇರಳ ಸರ್ಕಾರದ ಲಾಟರಿ ಇಲಾಖೆ, ಜಿಎಸ್ಟಿ ಕೌನ್ಸಿಲ್, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಹೆಸರಿನಲ್ಲಿ ದಾಖಲೆಗಳ ಫೋಟೋಗಳನ್ನು ಕಳುಹಿಸಿ ಹಣ ಪಾವತಿಸುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ವಿವಿಧ ಹಂತಗಳಲ್ಲಿ ಹಣ ಪಾವತಿಸಿದರೂ ಬಹುಮಾನದ ಮೊತ್ತ ಮಾತ್ರ ಸೀತಾರಾಮ ಭಟ್ ಅವರ ಖಾತೆಗೆ ಜಮೆಯಾಗಿರಲಿಲ್ಲ.ಮತ್ತೆ ಮತ್ತೆ ಹಣಕ್ಕೆ ಬೇಡಿಕೆಸೆ.24ರಿಂದ 30ರವರೆಗೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಪಾವತಿಸಿದರೂ ಹಣ ವಾಪಸ್ ಬರದ ಹಿನ್ನೆಲೆಯಲ್ಲಿ ಸೀತಾರಾಮ ಭಟ್ ಅವರಿಗೆ ಅನುಮಾನ ಮೂಡಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಹಣ ಖಾತೆಗೆ ಜಮೆಯಾಗಲಿದೆ ಎಂದು ಆರೋಪಿಗಳು ಭರವಸೆ ನೀಡಿದ್ದರು ಎನ್ನಲಾಗಿದೆ.ಅ.3ರಂದು ಮತ್ತೊಬ್ಬ ಅಪರಿಚಿತ ವ್ಯಕ್ತಿ ಸಂಪರ್ಕಿಸಿ, ಹಿಂದಿನ ಪಾವತಿಗಳ ಮೊತ್ತವನ್ನು ಖಾತೆಗೆ ಜಮೆ ಮಾಡಿಸುವುದಾಗಿ ಹೇಳಿ ಮತ್ತೆ ₹20,000 ಪಾವತಿಸುವಂತೆ ತಿಳಿಸಿದ್ದಾನೆ. ಅದನ್ನೂ ಪಾವತಿಸಿದರೂ ಹಣ ಬಂದಿರಲಿಲ್ಲ. ಅ.5ರಂದು ಬ್ಯಾಂಕ್ ಆಫ್ ಬರೋಡಾ ಹೆಸರಿನಲ್ಲಿ ಸಂದೇಶ ಕಳುಹಿಸಿ, ₹2.50 ಲಕ್ಷ ಮರುಪಾವತಿಗೆ ₹12,000 ಶುಲ್ಕ ಪಾವತಿಸುವಂತೆ ಮತ್ತೊಮ್ಮೆ ಬೇಡಿಕೆ ಇಡಲಾಗಿತ್ತು.ಹೀಗೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಒಟ್ಟು ₹2,34,272.99 ಹಣ ಕಳೆದುಕೊಂಡಿರುವುದಾಗಿ ಸೀತಾರಾಮ ಭಟ್ ದೂರಿನಲ್ಲಿ ತಿಳಿಸಿದ್ದಾರೆ. ವಂಚನೆಗೊಳಗಾಗಿರುವುದು ಅರಿವಿಗೆ ಬಂದ ಬಳಿಕ ಅವರು 1930 ಸೈಬರ್ ವಂಚನೆ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.










