ಮಂಗಳೂರು : ಲಂಚ ಪ್ರಕರಣದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಎಂ ಎ ನಟರಾಜ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ|| ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್ ಸಿ.ಎಲ್ ಇವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಮಾಡು ಈ ಭ್ರಷ್ಟರನ್ನು ಬಲೆಗೆ ಕೆಡವಿದ್ದಾರೆ.
ಪ್ರಕರಣದ ವಿವರ : ದೂರುದಾರರು ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರರಾಗಿದ್ದು, 2022-23ನೇ ಸಾಲಿನ 5ನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್ ಕೋಡಿ ಸರಕಾರಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಕಾಂಟ್ರಕ್ಟ್ ಕೆಲಸವನ್ನು ನಿರ್ವಹಿಸಿದ್ದರು. ಈ ಕಾಮಗಾರಿಯ ಬಾಬು ರೂ 9,77,154/- ಮೊತ್ತದ ಬಿಲ್ಲು ಮಂಜೂರಾತಿಯ ಬಗ್ಗೆ ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು ರವರಲ್ಲಿ ವಿಚಾರಿಸಿದಾಗ ಬಿಲ್ಲು ಪಾಸ್ ಮಾಡಲು ತನಗೆ ರೂ 37,000 ಲಂಚವನ್ನು ನೀಡುವಂತೆ ಮತ್ತು ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಯವರಿಗೆ ರೂ 15,000/- ಲಂಚವನ್ನು ನೀಡಬೇಕೆಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜೂನಿಯರ್ ಇಂಜಿನಿಯರ್ ನಾಗರಾಜು ರವರು ಮುಂಚಿತವಾಗಿ ರೂ 7,000/- ಹಣವನ್ನು ದೂರುದಾರರಿಂದ ಪಡೆದುಕೊಂಡಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು ರವರು ರೂ. 30,000 ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರು ರೂ 15,000 ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.