ವಿಟ್ಲ : ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಣ್ಣ ತನ್ನ ತಮ್ಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಜೀವವಧಿ ಶಿಕ್ಷೆ ನೀಡಿ ಆದೇಶಿಸಿದೆ.
ದಿನಾಂಕ 11-05-2022 ರಂದು ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಬಾಳಪ್ಪ ನಾಯ್ಕ ಮತ್ತು ಐತ್ತಪ್ಪ ನಾಯ್ಕ ರವರಿಗೆ ಯಾವುದೋ ವಿಷಯದಿಂದ ಮಾತಿಗೆ ಮಾತು ಬೆಳೆದು ಐತ್ತಪ್ಪ ನಾಯ್ಕನು ತನ್ನ ತಮ್ಮನಾದ ಬಾಳಪ್ಪ ನಾಯ್ಕನನ್ನು ಕೊಲ್ಲುವ ಉದ್ದೇಶದಿಂದ ಬಾಳಪ್ಪ ನಾಯ್ಕನ ತಲೆಗೆ ಹಾಗೂ ಇತರ ಭಾಗಗಳಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ತನಿಖಾಧಿಕಾರಿಯಾದ ನಾಗರಾಜ್ ಹೆಚ್ ಇ ಅವರ ನೇತೃತ್ವದಲ್ಲಿ ತನಿಖೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಿದ್ದರು.
ಬಳಿಕ ಅವರ ನೇತೃತ್ವದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದಿನಾಂಕ:20-07-2022 ರಂದು ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಸಾಕ್ಷಿದಾರರನ್ನು ಸೂಕ್ತ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣವನ್ನು ಶಿಕ್ಷೆಯಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಅವರು ಪ್ರಕರಣದ ಬಗ್ಗೆ ವಾದವನ್ನು ಮಂಡಿಸಿದ್ದರು.
ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ನ್ಯಾಯಾಧೀಶರಾದ ಸುನೀತಾ ಎಸ್ ಜಿ ಅವರು ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು 50000 ರೂ.ದಂಡ ವಿಧಿಸಿದ್ದಾರೆ