
ಮಂಗಳೂರು , ಸೆ.24: ಮಂಗಳೂರಿನ ಕಂಕನಾಡಿಯ ಬೆಂದೂರ್ ವೆಲ್ನಲ್ಲಿ ಕಾಸ್ಮೆಟಿಕ್ ಸರ್ಜರಿ(cosmetic surgery) ವೇಳೆ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಹ್ಮದ್ ಮಾಝಿನ್(32) ಮೃತ ರ್ದುದೈವಿ. ಉಳ್ಳಾಲದ ಅಕ್ಕರೆಕೆರೆ ನಿವಾಸಿಯಾದ ಮೊಹಮ್ಮದ್ ಮಾಝಿನ್, ತನ್ನ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಬೆಂದೂರ್ ವೆಲ್ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪರೆಂಟ್ ಕ್ಲಿನಿಕ್ಗೆ ಬಂದಿದ್ದ.
ವೈದ್ಯರು ಎಡವಟ್ಟಿನಿಂದ ಸಾವು ಎಂದು ಆರೋಪ
ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಸಣ್ಣ ಶಸ್ತ್ರಚಿಕಿತ್ಸೆ, ಸಂಜೆಯಾದರೂ ಮುಗಿಯದ ಹಿನ್ನೆಲೆ ಅನುಮಾನಗೊಂಡ ಮಾಝಿನ್ ಮನೆಯವರು, ಸಂಶಯಗೊಂಡು ವಿಚಾರಿಸಿದಾಗ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಾಝಿನ್ ಅವರನ್ನು ದಾಖಲು ಮಾಡಲಾಗಿದೆ. ಬಳಿಕ ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದು, ಈ ಕುರಿತು ಕದ್ರಿ ಠಾಣೆ ಪೊಲೀಸರು ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸ್ಮೆಟಿಕ್ ಸರ್ಜರಿ
ಕಾಸ್ಮೆಟಿಕ್ ಸರ್ಜರಿ ಅಥವಾ ಸೌಂದರ್ಯದ ಶಸ್ತ್ರಚಿಕಿತ್ಸೆ ಎಂದು ಕರೆಯಲಾಗುತ್ತದೆ. ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ತಂತ್ರಗಳ ಮೂಲಕ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದಾಗಿದೆ. ಇದರಿಂದ ಮುಖವು ಯೌವನ ಅಂದರೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸಬಹುದಾಗಿದೆ. ಹೆಚ್ಚಾಗಿ ಸೌಂದರ್ಯದ ಮೇಲೆ ಆಸಕ್ತಿ ಇದ್ದವರು ಇದನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ಇದೀಗ ಈ ಶಸ್ತ್ರಚಿಕಿತ್ಸೆಗೆ ಓರ್ವ ಅಸುನೀಗಿದ್ದಾನೆ.
