
ಮಂಗಳೂರು, ಸೆ.25: ಕಾಸರಗೋಡು ಜಿಲ್ಲೆಯ ಉಪ್ಪಳ, ಕನ್ಯಾನ ಸೇರಿದಂತೆ ಕೇರಳ ಗಡಿಭಾಗದಲ್ಲಿ ನಟೋರಿಯಸ್ ರೌಡಿಯಾಗಿದ್ದ ಕಾಲಿಯಾ ರಫೀಕ್ ನನ್ನು ಕೊಲೆಗೈದ ಪ್ರಕರಣದಲ್ಲಿ ಎಲ್ಲ ಒಂಬತ್ತು ಮಂದಿ ಆರೋಪಿಗಳನ್ನು ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
2017ರ ಫೆ.14ರಂದು ರಾತ್ರಿ ವೇಳೆ ಕಾಲಿಯಾ ರಫೀಕ್ ಕೇರಳದ ಮಂಜೇಶ್ವರ ಕಡೆಯಿಂದ ಮಂಗಳೂರಿನತ್ತ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದಾಗ ನೂರಾಲಿ ಮತ್ತು ಜಿಯಾ ಅವರ ತಂಡವು ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಇದರಂತೆ, ಕಾಲಿಯಾ ರಫೀಕ್ ಚಲಾಯಿಸಿಕೊಂಡು ಬರುತ್ತಿದ್ದ ಕಾರು ತಡರಾತ್ರಿ 12 ಗಂಟೆ ವೇಳೆಗೆ ಕೋಟೆಕಾರು ತಲುಪಿದಾಗ, ಮೊದಲೇ ಬುಕ್ ಮಾಡಿದ್ದ ಟಿಪ್ಪರ್ ಲಾರಿ ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಬಂದು ಕಾರಿಗೆ ಡಿಕ್ಕಿಯಾಗಿದೆ. ಇದರ ಹಿಂದೆ ಹಂತಕರ ಕಾರು ಕೂಡ ಬೆನ್ನಟ್ಟಿಕೊಂಡು ಬಂದಿತ್ತು. ಟಿಪ್ಪರ್ ಡಿಕ್ಕಿಯಾಗಿ ಕಾರಿನಿಂದ ಇಳಿಯುತ್ತಲೇ ರಫೀಕ್ ಮೇಲೆ ತಲವಾರಿನಿಂದ ಯರ್ರಾಬಿರ್ರಿ ಕಡಿದು ಹತ್ಯೆ ಮಾಡಲಾಗಿತ್ತು. ಒಂದು ಕಾಲದಲ್ಲಿ ಜೊತೆಗಿದ್ದವರೇ ಪರಸ್ಪರ ದ್ವೇಷದಿಂದ ಈ ಕೃತ್ಯ ನಡೆಸಿದ್ದರು.
ಪ್ರಕರಣದ ಬಗ್ಗೆ ಉಳ್ಳಾಲ ಠಾಣೆ ಇನ್ಸ್ ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ಪೊಲೀಸರು ತನಿಖೆ ನಡೆಸಿ, ಒಂಬತ್ತು ಮಂದಿಯ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಕುರಿತ 35 ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿತ್ತು. ಆದರೆ, ಸಕಾಲಿಕ ಸಾಕ್ಷ್ಯಗಳನ್ನು ಸಾಕ್ಷೀಕರಿಸಲು ಪೊಲೀಸರು ವಿಫಲವಾಗಿದ್ದರು. ಇದರಿಂದ ಆರೋಪ ಸಾಬೀತು ಮಾಡಲಾಗದೆ ಪೊಲೀಸರು ಸೋತಿದ್ದು, ನ್ಯಾಯಾಧೀಶ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
ಮಂಜೇಶ್ವರದ ಹಿದಾಯತ್ ನಗರದಲ್ಲಿ ಆರೋಪಿಗಳು ಒಗ್ಗೂಡಿ ಕೊಲೆಗೆ ಸಂಚು ಹೂಡಿದ್ದ ಮಾಹಿತಿ ಚಾರ್ಜ್ ಶೀಟ್ ನಲ್ಲಿತ್ತು. ಆದರೆ, ಆರೋಪ ಸಾಬೀತುಪಡಿಸಬಲ್ಲ ಸಾಂದರ್ಭಿಕ ಸಾಕ್ಷ್ಯಗಳು, ತಾಂತ್ರಿಕ ಸಾಕ್ಷ್ಯಗಳನ್ನು ಹಾಜರುಪಡಿಸಲು ಪೊಲೀಸರು ವಿಫಲವಾಗಿದ್ದಾರೆ. 1ನೇ ಆರೋಪಿ ನೂರಾಲಿ, 2ನೇ ಆರೋಪಿ ಜಿಯಾ ಅಲಿಯಾಸ್ ಇಸುಬು ಶಿಯಾಬ್, ರಶೀದ್, ಮಜೀಬ್ ಮತ್ತಿತರರು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿತ್ತು. ಆರೋಪಿಗಳ ವಿರುದ್ಧ ವಿಕ್ರಮ್ ಹೆಗ್ಡೆ, ರಾಜೇಶ್ ಕೆ.ಜೆ, ಅಬ್ದುಲ್ ಅಜೀಜ್ ಬಾಯಾರು ವಾದಿಸಿದ್ದರು.
ರೌಡಿ ಕಾಲಿಯಾ ರಫೀಕ್ ಹತ್ತು ವರ್ಷಗಳ ಹಿಂದೆ ಉಪ್ಪಳದಲ್ಲಿ ನಟೋರಿಯಸ್ ಗ್ಯಾಂಗ್ ಲೀಡರ್ ಆಗಿದ್ದ. ಕನ್ಯಾನ ಸೇರಿದಂತೆ ಗಡಿಭಾಗದ ಮರಳು ದಂಧೆ ಇನ್ನಿತರ ವಿಷಯದಲ್ಲಿ ಮಂಗಳೂರಿನ ಜಿಯಾ ಮತ್ತು ರಫೀಕ್ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇದೇ ದ್ವೇಷದಲ್ಲಿ ಜಿಯಾ ತಂಡದವರು ರಫೀಕ್ ನನ್ನು ನಡುರಾತ್ರಿ ಮಂಗಳೂರಿನತ್ತ ಬರುತ್ತಿದ್ದಾಗಲೇ ಹೊಂಚು ಹಾಕಿ ಕಡಿದು ಹಾಕಿದ್ದರು. ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳು ಇದ್ದರೂ, ಪೊಲೀಸರು ಮಾಡಿದ್ದ ಎಡವಟ್ಟುಗಳಿಂದಾಗಿ ಕೇಸು ಬಿದ್ದೋಗಿದೆ. ಕಾರು ಓಡಿಸುವುದರಲ್ಲಿ ತುಂಬ ಚಾಲಾಕಿಯಾಗಿದ್ದ ರಫೀಕ್ ನನ್ನು ಬೆನ್ನತ್ತಿ ಹಿಡಿಯಲಾಗದು ಎಂಬ ಕಾರಣಕ್ಕೆ ಟಿಪ್ಪರ್ ಲಾರಿಯನ್ನು ಪ್ಲಾನ್ ಹಾಕಿ ಎದುರಿನಿಂದ ಬರಲು ಹೇಳಿ ಡಿಕ್ಕಿಯಾಗಿಸಿದ್ದರು ಎಂದು ಆ ಸಂದರ್ಭದಲ್ಲಿ ಮಾತುಗಳು ಕೇಳಿಬಂದಿದ್ದವು.
