
ಕಾರವಾರ, ಸೆಪ್ಟೆಂಬರ್ 26: ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ಬಳಿಕ ನಡೆದ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮೂರನೇ ಬಾರಿ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಲಾರಿ, ಶವ ಬುಧವಾರ ಪತ್ತೆಯಾಗಿದೆ. ಜುಲೈ 16ರಂದು ಮಳೆಯ ಕಾರಣ ಗುಡ್ಡ ಕುಸಿತವಾಗಿ 9ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.
ನಾಪತ್ತೆಯಾದ ಲಾರಿ, ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಗುಡ್ಡ ಕುಸಿತದ ಕಾರ್ಯಾಚರಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್‌ಡೇಟ್ ನೀಡಿದ್ದಾರೆ. ‘ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಹಾಗೂ ಮಣ್ಣಿನಡಿ ಹೂತುಹೋಗಿದ್ದ ಲಾರಿಯನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ’ ಎಂದು ಹೇಳಿದ್ದಾರೆ.
‘ಕಾರ್ಯಾಚರಣೆಯ ಆರಂಭದಲ್ಲಿ ಅರ್ಜುನ್ ಸೇರಿದಂತೆ ನದಿಪಾಲಾಗಿದ್ದ ಪ್ರತಿಯೊಬ್ಬರನ್ನೂ ರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು. ಆದರೆ ವೇಗವಾಗಿ ಹರಿಯುತ್ತಿದ್ದ ನೀರು, ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಿ ಪರಿಣಮಿಸಿತ್ತು. ದುರಾದೃಷ್ಟವಶಾತ್ ರಕ್ಷಣಾಕಾರ್ಯ ಕೈಗೂಡಲಿಲ್ಲ, ದುರ್ಘಟನೆಯಲ್ಲಿ ಎಲ್ಲರೂ ಸಾವಿಗೀಡಾದರು. ಈ ಬಗ್ಗೆ ನನಗೂ ಬೇಸರವಿದೆ’ ಎಂದು ತಿಳಿಸಿದ್ದಾರೆ.
ಒಂದಷ್ಟು ಮೃತದೇಹಗಳನ್ನು ಈ ಹಿಂದೆಯೇ ಹೊರತೆಗೆದಿದ್ದೆವು, ಇಂದು ಅಂತಿಮವಾಗಿ ಮಣ್ಣಿನಡಿ ಸಿಲುಕಿದ್ದ ಲಾರಿಯ ಸಹಿತ ಚಾಲಕನ ಮೃತದೇಹ ಹೊರತೆಗೆಯಲಾಗಿದೆ. ಸ್ಥಗಿತಗೊಂಡಿದ್ದ ಶೋಧ ಕಾರ್ಯಾಚರಣೆಯನ್ನು ಮರು ಆರಂಭಿಸುವಂತೆ ಆತ್ಮೀಯರು, ಸಂಸದರು ಆದ ಎಐಸಿಸಿ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಅವರು ನಮ್ಮ ಸರ್ಕಾರವನ್ನು ಕೋರಿದ್ದರು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ಮಾನವೀಯ ನೆಲೆಯಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್‌ನ ಮೃತದೇಹವನ್ನು ಅವರ ಊರಿಗೆ ತಲುಪಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಸಿದ್ದರಾಮಯ್ಯ ಸಂತಾಪವನ್ನು ಸೂಚಿಸಿದ್ದಾರೆ.
