
ಪುತ್ತೂರು: ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಮತ್ತು ಗೋ ರಕ್ಷಣೆಗಾಗಿ ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್, ನಂದಿ ರಥಯಾತ್ರೆ ಸಂಚಾಲನ ಸಮಿತಿ ಪುತ್ತೂರು ಇದರ ವತಿಯಿಂದ ನಂದಿ ರಥ ಯಾತ್ರೆಯು ಮಾ.16ರಂದು ಪುತ್ತೂರಿಗೆ ಆಗಮಿಸಲಿದೆ ಎಂದು ನಂದಿ ರಥಯಾತ್ರೆಯ ಸಂಚಾಲನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸನ್ನ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ದರ್ಬೆ ವೃತ್ತದಿಂದ ಸಂಜೆ ಗಂಟೆ 4ಕ್ಕೆ ನಂದಿ ರಥಯಾತ್ರೆ ಆರಂಭಗೊಳ್ಳಲಿದ್ದು, ಡಾ. ಸಚಿನ್ ಶಂಕರ್ ಹಾರಕೆರೆ ಚಾಲನೆ ನೀಡಲಿದ್ದಾರೆ.ರಥಯಾತ್ರೆಯು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ದೇವರಮಾರು ಗದ್ದೆಯಲ್ಲಿ ಸಂಜೆ ಗಂಟೆ 5 ರಿಂದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. ಆ ಬಳಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದು, ಧಾರ್ಮಿಕ ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನೀನ್ಯಾರಿಗಾದೆಯೋ ಎಲೆ ಮಾನವ ಎಂಬ ಪುಣ್ಯ ಕೋಟಿಯ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ಡಾ. ಕೃಷ್ಣಪ್ರಸನ್ನ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಗೋಸೇವಾ ಗತಿವಿಧಿ ಕರ್ನಾಟಕ ಸಮಿತಿಯ ಪ್ರಕಾಶ್ಚಂದ್ರ ರೈ ಕೈಕಾರ, ನಂದಿ ರಥಯಾತ್ರೆ ಸಂಚಾಲನ ಸಮಿತಿ ಪುತ್ತೂರು ಇದರ ಕಾರ್ಯದರ್ಶಿ ದಿನೇಶ್ ಪಂಜಿಗ, ಕೋಶಾಧಿಕಾರಿ ಪ್ರಸನ್ನ ಮಾರ್ತ, ಸದಸ್ಯೆ ವಸಂತಲಕ್ಷ್ಮೀ ಉಪಸ್ಥಿತರಿದ್ದರು.
