ಮನೆ ಆವರಣದಲ್ಲಿ ಪಾರ್ಕಿಂಗ್ ಮಾಡಲು ಜಾಗ ಇಲ್ಲದವರು ಮನೆ ಹೊರಭಾಗದಲ್ಲಿರುವ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಹೀಗೆ ರಸ್ತೆ ಬದಿ ರಾತ್ರಿ ವಾಹನ ಪಾರ್ಕ್ ಮಾಡುವವರಿಗೆ ಆಘಾತಪಡುವ ಸುದ್ದಿಯೊಂದು ಇಲ್ಲಿದೆ ನೋಡಿ, ರಸ್ತೆ ಬದಿ ಪಾರ್ಕಿಂಗ್ ಮಾಡಿದ್ದ ಕಾರೊಂದಕ್ಕೆ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.

ಈ ಕೃತ್ಯದ ಎಲ್ಲಾ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ವೀಡಿಯೋದಲ್ಲಿ ಕಾಣಿಸುವಂತೆ ರಾತ್ರಿ ಒಂದು ಗಂಟೆ ಸುಮಾರಿಗೆ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ತಲೆಗೆ ಮುಸುಕು ಹಾಕಿಕೊಂಡು ಬರುವ ಇಬ್ಬರು ದುಷ್ಕರ್ಮಿಗಳು, ಮೊದಲಿಗೆ ಪಾರ್ಕಿಂಗ್ ಮಾಡಿ ಕವರ್ ಹೊದಿಸಿದ್ದ ಕಾರಿನ ಮೇಲೆ ಒಂದು ಲೀಟರ್‌ನಷ್ಟಿರುವ ಪೆಟ್ರೋಲ್‌ ಬಾಟಲ್‌ ತಂದು ಕಾರಿನ ಮೇಲೆ ಬಗ್ಗಿಸಿದ್ದಾರೆ. ನಂತರ ಕಡ್ಡಿ ಗೀರಿ ಬೆಂಕಿ ಹಚ್ಚಿ ಸ್ಥಳದಿಂದ ಓಡಿ ಹೋಗಿದ್ದಾರೆ. ಗಾಜಿಪುರದ ಗ್ಹಮರ್ ಪ್ರದೇಶದ ಸೆರೊಯಿ ಎಂಬಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಕಾಣಿಸುವಂತೆ 15 ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಈಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆದರೆ ಈ ಕಾರು ಯಾರದ್ದು ಎಂಬ ಬಗ್ಗೆ ಮಾಹಿತಿ ಇಲ್ಲ, ಆದರೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಗಾಜಿಪುರ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳಿಗಾಗಿ ಬಲೆ ಬೀಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು @gharkekalesh ಎಂಬ ಟ್ವಿಟ್ಟರ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಮೂರು ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದಾರೆ. ಇದೊಂದು ಅಸೂಯೆಯಿಂದ ನಡೆಸಿದ ಕೃತ್ಯ ಎಂಬುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ಬಹುಶಃ ಕೃತ್ಯವೆಸಗಿದವರಿಗೆ ಕಾರು ಮಾಲೀಕ ವೆಲ್ಕಮ್ ರೈಡ್ ನೀಡಿಲ್ಲವೆಂದೆನಿಸುತ್ತದೆ. ಎಂತಹ ದೊಡ್ಡ ನಷ್ಟವಿದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇಂದಿನ ದಿನಮಾನದಲ್ಲಿ ಬಹುತೇಕ 90ರಷ್ಟು ಜನ ಕಾರನ್ನು ಸಾಲ ಮಾಡಿಯೇ ಕೊಂಡಿರುತ್ತಾರೆ. ಆದರೆ ಹೀಗೆ ಕೊಂಡು ತಂದ ಕಾರಿಗೆ ಕಿಡಿಗೇಡಿಗಳು ಇಂತಹ ಕೃತ್ಯವೆಸಗಿದರೆ ಅವರ ಕತೆ ಏನಾಗಬೇಕು?

Leave a Reply

Your email address will not be published. Required fields are marked *

Join WhatsApp Group
error: Content is protected !!