ಬೆಂಗಳೂರು  (ಅ.02): ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿಯನ್ನು ಹನಿಟ್ರ್ಯಾಪ್‌ ಮಾಡಿ ಅವರಿಗೆ ರಾಸಲೀಲೆ ವಿಡಿಯೋವನ್ನು ತೋರಿಸಿ ಬರೋಬ್ಬರಿ 6 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಹನಿಟ್ರ್ಯಾಪ್ ಮಾಡಿ ಖೆಡ್ಡಾಕ್ಕೆ ಬೀಳಿಸಿದ್ದ ತಂಡದ ವಿದ್ಯಾ ಬಿರಾದರ್ ಪಾಟೀಲ್ ಹಾಗೂ ಆಕೆಯ ಸಹಚರರಾದ ಗಗನ್, ಸೂರ್ಯನಾರಾಯಣ್ ಎಂಬುವವರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿರುವ ಮಠ ಮಂದಿರಗಳ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ಮಠ ಮಂದಿರದ ಸ್ವಾಮೀಜಿಗಳಿಗೆ ಹನಿಟ್ರ್ಯಾಪ್, ಬೆದರಿಕೆಗಳನ್ನು ಹಾಕಿ ಕೋಟ್ಯಂತರ ರೂ. ಹಣವನ್ನು ವಂಚನೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜನರಿಂದ ಬರುವ ದೇಣಿಗೆ ಆಧಾರದಲ್ಲಿಯೇ ನಡೆಯುವ ಮಠದ ಸ್ವಾಮೀಜಿಗಳ ಮೇಲೆ ಧಾರ್ಮಿಕ ಭಾವನೆ ಇಲ್ಲದೇ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆಯ ಚಿಂತನೆ ಎತ್ತ ಸಾಗುತ್ತಿದೆ ಎಂಬ ಅನುಮಾನಗಳು ಹಾಗೂ ಆತಂಕ ವ್ಯಕ್ತವಾಗುತ್ತಿದೆ.

ಏನಿದು ರುದ್ರಮುನಿಸ್ವಾಮಿಜೀ ಹನಿಟ್ರ್ಯಾಪ್ ಪ್ರಕರಣ.?
ರುದ್ರಮುನಿ ಸ್ವಾಮಿಜಿಯ ರಾಸಲೀಲೆ ವಿಡಿಯೋ ಪೆನ್ ಡ್ರೈವ್ ತೋರಿಸಿ ಬೆದರಿಕೆ ಹಾಕಲಾಗಿದೆ. ಹಣ ಕೊಟ್ಟರೆ ಪೆನ್ ಡ್ರೈವ್ ಕೊಡುವುದಾಗಿ ಬೆದರಿಸಿದ್ದಾರೆ. ವಿದ್ಯಾ ಬಿರಾದರ್ ಪಾಟೀಲ್, ಗಗನ್, ಸೂರ್ಯನಾರಾಯಣ ಸೇರಿ ಮೂವರೂ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಗಾಂಧಿನಗರದ ರಾಮಕೃಷ್ಣ ಹೋಟೆಲ್‌ನಲ್ಲಿ ಒಟ್ಟು 6 ಕೋಟಿ ರೂ. ಹಣವನ್ನು ನೀಡುವಂತೆ ಡೀಲ್ ಮಾಡಲಾಗಿದೆ. ನೀವು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ರಾಸಲೀಲೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದೆ.

ಷಡಕ್ಷರಿ ಮಠದ ಸ್ವಾಮೀಜಿಗೆ ತಕ್ಷಣಕ್ಕೆ ನೀವು 50 ಲಕ್ಷ ರೂ. ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ರಾಸಲೀಲೆ ವಿಡಿಯೋದ ಒಂದು ತುಣುಕನ್ನು ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವದಾಗಿ ಹೇಳಿದ್ದಾರೆ. ಇನ್ನು ಹಣವನ್ನು ಹೊಂದಿಸಲಾಗದೇ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರು ಸ್ಥಳೀಯವಾಗಿ ಯಾವುದೇ ದೂರನ್ನು ನೀಡದೇ ಗುಪ್ತವಾಗಿ ಬಂದು ಸಿಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ಬೆನ್ನು ಹತ್ತಿ ಮೂವರು ವಂಚಕರನ್ನು ಕೆಡ್ಡಾಕ್ಕೆ ಬೀಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!