

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರು ಬೆನ್ನುಹುರಿ ಸಮಸ್ಯೆಗೆ ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬುಧವಾರ ಕರ್ನಾಟಕ ಹೈಕೋರ್ಟ್ ಆರು ವಾರಗಳ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಸರಿಸುಮಾರು ನಾಲ್ಕೂವರೆ ತಿಂಗಳ ಬಳಿಕ ದರ್ಶನ್ ತಾತ್ಕಾಲಿಕವಾಗಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ವೈದ್ಯಕೀಯ ಕಾರಣಕ್ಕಾಗಿ ಮಧ್ಯಂತರ ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ವೈದ್ಯಕೀಯ ಜಾಮೀನು ಕೋರಿರುವ ನಟ ದರ್ಶನ್ ಅವರ ಮಧ್ಯಂತರ ಅರ್ಜಿಯನ್ನು ಆರು ವಾರಗಳಿಗೆ ಸೀಮಿತಗೊಳಿಸಿ ಪುರಸ್ಕರಿಸಲಾಗಿದೆ. ದರ್ಶನ್ ತಮ್ಮ ಪಾಸ್‌ಪೋರ್ಟ್ ಅನ್ನು ವಿಚಾರಣಾಧೀನ ನ್ಯಾಯಾಲಯದ ವಶಕ್ಕೆ ಸಲ್ಲಿಸಬೇಕು. ದರ್ಶನ್ ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆಗೆ ಒಳಗಾಗಬಹುದು. ಆರೋಗ್ಯ ಪರಿಸ್ಥಿತಿ, ಪ್ರಸ್ತಾವಿತ ಚಿಕಿತ್ಸೆ ಮತ್ತು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಮತ್ತು ಆನಂತರದ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ. ವಿಸ್ತ್ರತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
