
ಸೈಕಲ್ ಸ್ಟಂಟ್ ಮಾಡುತ್ತಾ ನಿಯಂತ್ರಣ ತಪ್ಪಿ ಬಾಲಕನೊಬ್ಬ ಗೋಡೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯ ಆಘಾತಕಾರಿ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತ ಬಾಲಕನನ್ನು 16 ವರ್ಷದ ನೀರಜ್ ಯಾದವ್ ಎಂದು ಗುರುತಿಸಲಾಗಿದೆ. ಬಾಲಕ ಮೀರಾ-ಭಯಂದರ್‌ನಲ್ಲಿರುವ ಕೋಟೆಯ ಇಳಿಜಾರಿನಲ್ಲಿ ವೇಗವಾಗಿ ಹೋಗುವಾಗ ಗೋಡೆಗೆ ಡಿಕ್ಕಿ ಹೊಡೆದು ತಕ್ಷಣ ಕುಸಿದುಬಿದಿದ್ದಾನೆ.
ಮೀರಾ ರಸ್ತೆ ಬಳಿ ವಾಸವಿದ್ದ ನೀರಜ್ ಸೋಮವಾರ ಘೋಡಬಂದರ್ ಕೋಟೆಗೆ ಸೈಕಲ್ ನಲ್ಲಿ ತೆರಳಿದ್ದ. ಕಡಿದಾದ ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಸೈಕಲ್ ನಿಯಂತ್ರಣ ತಪ್ಪಿ ಮನೆಯೊಂದರ ಗೇಟ್ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
ಬಾಲಕ ಸ್ಥಳದಲ್ಲೇ ಕುಸಿದು ಬಿದ್ದಾಗ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅಪಘಾತ ಸ್ಥಳದ ಸುತ್ತ ಜನರು ಜಮಾಯಿಸಿದ್ದಾರೆ. ದಾರಿಹೋಕರು ಆತನನ್ನು ಪರೀಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಬಾಲಕ ಯಾವುದಕ್ಕೂ ಸ್ಪಂದಿಸಿಲ್ಲ. ಬಳಿಕ ಆತನನ್ನು ಹತ್ತಿರದ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
