
ನವೆಂಬರ್ 17: ಕಾಂಗ್ರೆಸ್ ಮುಖಂಡನ ಪುತ್ರನ ಥಾರ್ ಜೀಪ್ ಗೆ ಅಮಾಯಕ ರಿಕ್ಷಾ ಚಾಲಕ ಬಲಿಯಾದ ಘಟನೆ ಬೆಳಪು ಮಿಲಿಟ್ರಿ ಕಾಲೋನಿಯಲ್ಲಿ ನಡೆದಿದೆ.
ಮೃತರನ್ನು ಬೆಳಪುವಿನ ಮುಹಮ್ಮದ್ ಹುಸೇನ್(39) ಎಂದು ಗುರುತಿಸಲಾಗಿದೆ. ಇವರು ನವೆಂಬರ್ 13ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಲ್ಲಿ ಬಂದ ಜೀಪು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಬಳಿಕ ಚಾಲಕ ಪ್ರಜ್ವಲ್ ಶೆಟ್ಟಿ ಜೀಪನ್ನು ನಿಲ್ಲಿಸದೆ ಪರಾರಿಯಾಗಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ಆರೋಪಿ ಪ್ರಜ್ವಲ್ ಶೆಟ್ಟಿ ಹಾಗೂ ಜೀಪವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರಗಿಸಿರುವುದಾಗಿ ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಹುಸೇನ್ ಉಡುಪಿ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಹುಸೇನ್ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಅಪಘಾತದ ಭೀಕರತೆಗೆ ಸಾಕ್ಷಿಯಾಗಿದ್ದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಪ್ರಕರಣ ನಡೆದ ಬೆನ್ನಲ್ಲೇ ಪ್ರಜ್ವಲ್ ಶೆಟ್ಟಿ ತಲೆಮರೆಸಿಕೊಂಡಿದ್ದನು. ಇದೀಗ ಆರೋಪಿಯನ್ನ ಶಿರ್ವ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.






