ಮಣಿಪುರದಲ್ಲಿ (Manipur Riots) ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇತ್ತೀಚೆಗಷ್ಟೇ ನಾಪತ್ತೆಯಾಗಿದ್ದ ಆರು ಮಂದಿಯಲ್ಲಿ ಮೂವರು ಶವವಾದ ಬಳಿಕ ಜನರ ಆಕ್ರೋಶ ಮಿತಿಮೀರಿದೆ. ಆಕ್ರೋಶಿತರ ಗುಂಪು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ (N Biren Singh) ಅವರ ಖಾಸಗಿ ನಿವಾಸದ ಮೇಲೂ ದಾಳಿ ನಡೆಸಿದೆ.

ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಹ ಸಿಡಿಸಿದ್ದು, ಜನರು ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸುವಾಗ ಅವರು ಮನೆಯಲ್ಲಿ ಇರಲಿಲ್ಲ. ಅವರು ತಮ್ಮ ಕಚೇರಿಯಲ್ಲಿದ್ದರು. ಹೀಗಾಗಿ ಯಾವುದೇ ಅನಾಹುತ ಆಗಿಲ್ಲ. ಸಿಎಂ ಬಿರೇನ್ ಸಿಂಗ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರ ಕ್ಷಣದಿಂದ ಕ್ಷಣಕ್ಕೆ ಭುಗಿಲೇಳುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆ ಅರಿತ ರಾಜ್ಯ ಸರ್ಕಾರ ಇಂಫಾಲ್‌ನಲ್ಲಿ ಕರ್ಫ್ಯೂ ವಿಧಿಸಿದೆ. ಜನರ ಪ್ರತಿಭಟನೆಯು ಹಿಂಸಾಸ್ವರೂಪ ಪಡೆದ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿಭಟನಾಕಾರರು ಇಂಫಾಲ್‌ನಲ್ಲಿ ಇಬ್ಬರು ಸಚಿವರು ಮತ್ತು ಮೂವರು ಶಾಸಕರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಸಚಿವರ ನಿವಾಸದ ಮೇಲೆ ದಾಳಿ!

ಮಾಹಿತಿಯ ಪ್ರಕಾರ, ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾನ್‌ಫೆಲೆ ಸಂಕೇತೆಲ್‌ನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಅವರ ನಿವಾಸದ ಮೇಲೂ ಗುಂಪು ದಾಳಿ ನಡೆದಿದೆ. ಕೈಯಲ್ಲಿ ಕೋಲು ಆಯುಧಗಳನ್ನು ಹಿಡಿದುಕೊಂಡ ಜನರ ಬೃಹತ್ ಗುಂಪು ಗ್ರಾಹಕರ ವ್ಯವಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಎಲ್. ಸುಸಿಂದ್ರೋ ಸಿಂಗ್ ಮನೆ ಮೇಲೆ ದಾಳಿ ನಡೆಸಿದೆ.

ಸಿಎಂ ಅಳಿಯನ ಮನೆ ಮುಂದೆ ಪ್ರತಿಭಟನೆ

ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಅಳಿಯ ಮತ್ತು ಬಿಜೆಪಿ ಶಾಸಕ ಆರ್‌ಕೆ ಇಮೋ ಅವರ ನಿವಾಸದ ಹೊರಗೆ ಪ್ರತಿಭಟನಾಕಾರರು ಜಮಾಯಿಸಿದ್ದು, ಈ ವೇಳೆ ಪ್ರತಿಭಟನಾಕಾರರು ಈ ಕೊಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದಲ್ಲದೇ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದಲ್ಲದೆ, ಕೇಶಾಮ್‌ಥಾಂಗ್ ಕ್ಷೇತ್ರದ ಟಿಡ್ಡಿಮ್ ರಸ್ತೆಯಲ್ಲಿರುವ ಸ್ವತಂತ್ರ ಶಾಸಕ ಸಪಂ ನಿಶಿಕಾಂತ್ ಸಿಂಗ್ ಅವರ ನಿವಾಸದ ಹೊರಗೆ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಶಾಸಕರ ಒಡೆತನದ ಸ್ಥಳೀಯ ಪತ್ರಿಕೆಯೊಂದರ ಕಚೇರಿ ಮೇಲೂ ಪ್ರತಿಭಟನಾಕಾರರು ದಾಳಿ ನಡೆಸಿ ಅಲ್ಲಿದ್ದ ಪೀಠೋಪಕರಣಗಳನ್ನು ಕೆಡವಿ ಹಾಕಿದ್ದಾರೆ.

ಹಿಂಸಾಚಾರ ನಡೆದಿದ್ದೇಕೆ?

ಜಿರಿಬಾಮ್ ಜಿಲ್ಲೆಯಿಂದ ನಾಪತ್ತೆಯಾದ ಆರು ಜನರ ಪೈಕಿ ಮೂವರ ಶವಗಳು ಶುಕ್ರವಾರ ರಾತ್ರಿ ಮಣಿಪುರ-ಅಸ್ಸಾಂ ಗಡಿಯಲ್ಲಿರುವ ಜಿರಿ ಮತ್ತು ಬರಾಕ್ ನದಿಗಳ ಸಂಗಮದ ಬಳಿ ಪತ್ತೆಯಾಗಿತ್ತು. ಈ ಶವ ಪತ್ತೆಯಾದ ಬಳಿಕ ಆರೋಪಿಗಳ ಪತ್ತೆಗಾಗಿ ಮತ್ತು ಕೊಲೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕ ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಶವಗಳನ್ನು ನಿನ್ನೆ ರಾತ್ರಿ ಅಸ್ಸಾಂನ ಸಿಲ್ಚಾರ್‌ಗೆ ತರಲಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಗುರುತಿಗಾಗಿ ಛಾಯಾಚಿತ್ರಗಳನ್ನು ಸಂಗ್ರಹಿಸಲಾಗಿದೆ.

AFSPA ಹೇರಿಕೆ

ನವೆಂಬರ್ 14 ರಂದು, ಗೃಹ ಸಚಿವಾಲಯವು ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮಾಯ್ ಮತ್ತು ಲಾಮ್ಸಾಂಗ್, ಇಂಫಾಲ್ ಪೂರ್ವದ ಲಾಮ್ಲೈ, ಬಿಷ್ಣುಪುರದ ಮೊಯಿರಾಂಗ್, ಕಾಂಗ್ಪೋಕ್ಪಿಯ ಲಿಮಾಖೋಂಗ್ ಮತ್ತು ಜಿರಿಬಾಮ್ ಜಿಲ್ಲೆಯ ಜಿರಿಬಾಮ್ ಪ್ರದೇಶಗಳಲ್ಲಿ AFSPA ಅನ್ನು ಪುನಃ ಜಾರಿಗೊಳಿಸಿತು.

ಅದೇ ಸಮಯದಲ್ಲಿ, ಮಣಿಪುರ ಸರ್ಕಾರವು ರಾಜ್ಯದ ಆರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ಪರಿಶೀಲಿಸಲು ಮತ್ತು ತೆಗೆದುಹಾಕಲು ಕೇಂದ್ರಕ್ಕೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!