
ಇಲ್ಲಿನ ಕುರ್ಲಾ ಪ್ರದೇಶದಲ್ಲಿ ಸೋಮವಾರ ರಾತ್ರಿ ಬಸ್ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 43 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಅಫ್ರೀನ್ ಷಾ (19), ಕನ್ನಿಸ್ ಅನ್ಸಾರಿ (55), ಅನಮ್ ಶೇಖ್, ಶಿವಂ ಕಶ್ಯಪ್, ವಿಜಯ್ ಗಾಯಕ್ವಾಡ್ ಮತ್ತು ಫಾರುಕ್ ಚೌಧರಿ ಎಂದು ಗುರುತಿಸಲಾಗಿದೆ.
ಮೃತ ಅಫ್ರೀನ್ ಷಾ ಅಂದು ಮೊದಲ ಕೆಲಸ ಆರಂಭಿಸಿದ್ದು, ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಆಟೋರಿಕ್ಷಾ ಸಿಗದ ಹಿನ್ನೆಲೆಯಲ್ಲಿ ಆಕೆ ತನ್ನ ತಂದೆ ಅಬ್ದುಲ್ ಸಲೀಂಗೆ ಕರೆ ಮಾಡಿದಳು. ಸಲೀಂ ಆಕೆಗೆ ಕುರ್ಲಾ ಸ್ಟೇಷನ್‌ಗೆ ಹೋಗುವಂತೆ ಸಲಹೆ ನೀಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ಹೋಗುವಂತೆ ಸಲೀಂಗೆ ಫೋನ್ ಕರೆ ಬಂತು. ಹೀಗೆ ಅವರು ಆಸ್ಪತ್ರೆಗೆ ಬಂದಾಗ ಬರಸಿಡಿಲು ಬಡಿದಂತಾಯಿತು.
ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆಯಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಬಸ್, ಜನನಿಬಿಡ ಪ್ರದೇಶದಲ್ಲಿ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸಂತ್ರಸ್ತರ ಕುಟುಂಬಗಳು ನ್ಯಾಯಕ್ಕಾಗಿ ಒತ್ತಾಯಿಸಿದ್ದು, ಪ್ರದೇಶದಲ್ಲಿ ಸುರಕ್ಷತೆ ಸುಧಾರಣೆಗಳ ಕೊರತೆಯು ದುರಂತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇತ್ತ ಬಸ್ ಚಾಲಕ ಸಂಜಯ್ ಮೋರೆಯನ್ನು ಪೊಲೀಸರು ಬಂಧಿಸಿದ್ದಾರೆ .
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪ್ರತಿ ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಕೂಡ ಸರಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.






